ಧಾರ್ಮಿಕ ಆಚರಣೆಯಿಂದ ಗ್ರಾಮಗಳಲ್ಲಿ ನೆಮ್ಮದಿಯ ವಾತಾವರಣ

ಮಧುಗಿರಿ, ಸೆ. ೨೨- ಧಾರ್ಮಿಕ ಆಚರಣೆಗಳಿಂದ ಮಾತ್ರ ಗ್ರಾಮದ ಜನರಲ್ಲಿ ಶ್ರದ್ಧಾ, ಭಕ್ತಿಯ ಜೊತೆಗೆ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಕೊರಟಗೆರೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ತಿಳಿಸಿದರು .
ಪುರವರ ಹೋಬಳಿಯ ಗಿರೇಗೌಡನಹಳ್ಳಿ ಗ್ರಾಮದಲ್ಲಿ ನಡೆದ ಬೇಲದ ರಂಗನಾಥಸ್ವಾಮಿಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ನಂತರ ದೇಶದ ಅತ್ಯುನ್ನತವಾದ ಪ್ರಧಾನಮಂತ್ರಿ ಸ್ಥಾನಕ್ಕೆ ಮಹಿಳೆಯಾದ ಇಂದಿರಗಾಂಧಿ ಏರಿದಾಗ ದೇಶದ ಜನರ ಜತೆಗೆ ಇತರೆ ದೇಶಗಳ ಜನರು ಕೂಡಾ ಹಾಸ್ಯ ಮಾಡಿದ್ದರಂತೆ.
ಆದರೆ ಅವರು ದಿಟ್ಟತನದಿಂದ ಅಧಿಕಾರ ಚಲಾಯಿಸಿದ್ದು ಮತ್ತು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿದ ರೀತಿಯನ್ನು ಇತರರು ಹುಬ್ಬೇರುವಂತೆ ಮಾಡಿರುವ ಬಗ್ಗೆ ಇತಿಹಾಸವೇ ತಿಳಿಸುತ್ತದೆ ಎಂದರು.
ಇಂದಿನ ಮಹಿಳೆಯರು ಅದರಲ್ಲೂ ವಿದ್ಯಾವಂತ ಮಹಿಳೆಯರು ರಾಜಕೀಯವಾಗಿ ಜಾಗ್ರತಿ ಪಡೆಯುವುದರ ಜತೆಗೆ ಅದರಲ್ಲಿ ಪಾಲ್ಗೊಂಡು ದೇಶದ ಅಭಿವೃದ್ದಿಗೆ ಸಹಕರಿಸೋಣ ಎಂದರು.
ಮುಖಂಡ ಗಾಳಿಹಳ್ಳಿ ಜಿ.ಎನ್. ಈಶ್ವರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯವ ದೇವರ ಕಾರ್ಯಗಳಿರಬಹುದು ಅಥವಾ ದೇವಸ್ಥಾನಗಳ ಅಭಿವೃದ್ದಿ ವಿಚಾರ ಬಂದಾಗ ಜನರು ಜಾತಿ, ಧರ್ಮ ಮರೆತು ಒಬ್ಬರಿಗೊಬ್ಬರೂ ಸಹಕರಿಸುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ನಾಗಮಣಿ, ಗಿರೇಗೌಡನಹಳ್ಳಿ ಗ್ರಾ.ಪಂ. ಸದಸ್ಯ ಜಿ.ಸಿ. ರಂಗನಾಥ್, ಗೋಪಾಲ್ ನಾಯ್ಕ್, ಮುಖಂಡರಾದ ಶ್ರೀರಂಗರಾಜು, ಶಾಂತರಾಜು, ಕೋಡ್ತಾಪುರ ರಾಜು, ಕೃಷ್ಣ, ರಾಜಕುಮಾರ್, ದಾದಲೂರಪ್ಪ ಮಲ್ಲಿಕಾರ್ಜುನ್ , ಕೊರಟಗೆರೆ ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷ ಎಚ್. ಎಸ್. ಮಂಜುಳಾ ಕಾರ್ಯದರ್ಶಿಗಳಾದ ಸುಮಿತ್ರ, ಪಾರ್ವತಮ್ಮ, ಚಂದ್ರಮ್ಮ ಮತ್ತಿತರರು ಉಪಸ್ಥಿತರಿದ್ದರು.