ಧಾರ್ಮಿಕ ಅಪ್ರಬುದ್ಧತೆ ಹೆಚ್ಚು ಅಪಾಯಕಾರಿ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು4: ಧಾರ್ಮಿಕ ಅಪ್ರಭುದ್ಧತೆ ಹೆಚ್ಚು ಅಪಾಯಕಾರಿ ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದಲು ಪರಸ್ಪರ ದ್ವೇಷ ಪ್ರದರ್ಶಿತಗೊಳ್ಳುತ್ತಿವೆ, ಗುರುವಿನ ಚಿಂತನೆಗಳು ಸಮಾಜದ ಸ್ಥರಗಳಲ್ಲಿ ಮೇಲು-ಕೀಳೆಂಬ ಅಂತರ ಕಡಿಮೆ ಮಾಡುವಲ್ಲಿ ಯಶಸ್ಸು ಕಂಡಿವೆ ಹೀಗಾಗಿ ಮನುಕುಲದ ಉಳಿವಿಗೋಸ್ಕರ ಗುರುವಿನ ಸಂದೇಶಗಳು ಅತೀ ಅವಶ್ಯವೆಂದು ಕನಕಗುರು ಪೀಠದ ನಿರಂಜನಾನಂದಪುರಿಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಕಾಗಿನೆಲೆ ಗ್ರಾಮದ ಕನಕಗುರುಪೀಠದಲ್ಲಿ ಜರುಗಿದ `ಗುರುಪೂರ್ಣಿಮಾ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಾನವೀಯ ಮೌಲ್ಯದ ತಿರಳನ್ನು ಹೊಂದಿರುವ ಸಂದೇಶಗಳು ಸಮಾಜದಲ್ಲಿ ಹೆಚ್ಚು ಬೆಳಕು ಚೆಲ್ಲುತ್ತವೆ, ಸಮಾಜ ಮುನ್ನಡೆಯಬೇಕಾದರೆ ಗುರುವಿನ ಸನ್ಮಾರ್ಗಗಳು ಅವಶ್ಯಕ ಇದರಿಂದ ಸಾಮಾಜಿಕ, ಸಾಂಸ್ಕøತಿಕ, ಪಾರಮಾರ್ಥಿಕ ಹಾಗೂ ಸ್ವತಂತ್ರ ಮನೋಧರ್ಮ ಸಹ ಗುರುವಿನ ಮಾರ್ಗದರ್ಶನದಿಂದ ಬೆಳಕಿಗೆ ಬಂದಿವೆ ಎಂದರು.
ಸಮಾಜದ ಒಳಿತಿಗೆ ಗುರುಗಳು:ದಾರ್ಶನಿಕರು, ಗುರುಗಳು ಸೇರಿದಂತೆ ಸಮಾಜದ ಒಳಿತಿಗೆ ಶ್ರಮಿಸಿದವರನ್ನು ಸಮಾಜ ಮರೆಯುತ್ತಿದೆ, ಕೇವಲ ಅಧಿಕಾರದಲ್ಲಿದ್ದವರನ್ನು ನೆನೆಸಿಕೊಳ್ಳುತ್ತಿರುವ ಸಮಾಜದ ಜನರು ತಮ್ಮ ಗುರುಗಳನ್ನು ಬೇರೆ ರೀತಿಯಲ್ಲಿ ಸಮೀಕರಿಸುತ್ತಿದ್ದು ಗುರುಗಳ ಆಲೋಚನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳ್ಳುತ್ತಿಲ್ಲ ಎಂದರು.
ವಾಸ್ತವದಲ್ಲಿ ನಡೆಯುತ್ತಿರುವುದೇ ಬೇರೆ:ಗುರುಗಳು ಎಂದಿಗೂ ಯಾರ ವಿರುದ್ಧವೂ ಪ್ರಚೋದಿಸುವುದಿಲ್ಲ, ಆದರೆ ವಾಸ್ತವ ದಲ್ಲಿ ನಡೆಯುತ್ತಿರುವುದೇ ಬೇರೆ, ಅತೀರೇಕದ ಭಕ್ತಿ ಪ್ರದರ್ಶಿಸುವ ಜನರಿಂದ ಸ್ವತಃ ಗುರುಗಳೇ ಮುಜುಗುರಕ್ಕೆ ಒಳಗಾ ಗುವ ಸಂದರ್ಭಗಳು ಎದುರಾಗುತ್ತಿವೆ, ಗುರುವಿನ ಮಾರ್ಗದರ್ಶನ ಕೊರತೆಯಿಂದ ಪ್ರಸ್ತುತ ಸಮಾಜ ನಮಗರವಿಲ್ಲ ದಂತೆ ವಿಘಟನೆಯತ್ತ ಸಾಗಿದೆ ಎಂದರು.
ವೇದಿಕೆಯಲ್ಲಿ ಈಶ್ವರಾನಂದಪುರಿಶ್ರೀ ಸೇರಿದಂತೆ ಸರೂರು ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಜಿ, ತುರ್ವಿನಾಳದ ಮಾದಯ್ಯ ಗುರುವಿನ ಸ್ವಾಮೀಜಿ, ಮುತ್ತಯ್ಯ ಸ್ವಾಮೀಜಿ ಮಹಾದೇವಯ್ಯ ಒಡೆಯರ್ ಎಸ್.ಎಫ್.ಎನ್.ಗಾಜೀಗೌಡ್ರ ಅಧ್ಯಕ್ಷತೆ ವಹಿಸಿದ್ದರು, ಹಾವೇರಿ ಮತ್ತು ಗದಗ ಜಿಲ್ಲಾ ಕುರುಬ ಸಂಘ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಕುರುಬ ಸಂ ಘದ ಅಧ್ಯಕ್ಷರು ಹಾಗೂ ರಾಜ್ಯದ ವಿವಿಧ ಭಾಗದಿಂದ ಬಂದ ಭಕ್ತರು ಉಪಸ್ಥಿತರಿದ್ದರು ಪ್ರಕಾಶ್ ಕರಿ ಸ್ವಾಗತಿಸಿದರು, ಪ್ರಾಂಶುಪಾಲ ಎಂ.ಬೀರಪ್ಪ ನಿರೂಪಿಸಿ ವಂದಿಸಿದರು.