ಧಾರ್ಮಿಕತೆಯ ಜತೆಗೆ ಶಿಕ್ಷಣಕ್ಕೂ ಒತ್ತು ನೀಡಿ

ಮಧುಗಿರಿ, ನ. ೨೪- ಕಾರ್ತಿಕ ಮಾಸದ ಅಂಗವಾಗಿ ಪ್ರತಿ ಗ್ರಾಮ ಮತ್ತು ದೇವಸ್ಥಾನಗಳಲ್ಲಿ ದೇವತಾ ಆರಾಧನೆ, ಧ್ಯಾನ ಮಾಡುವುದು, ವಿಶೇಷ ಪೂಜೆ ಸಲ್ಲಿಸುವುದು ಸನಾತನ ಧರ್ಮ ಮತ್ತು ಆಚರಣೆಯಲ್ಲಿ ಬೆಳೆದು ಬಂದಿದೆ ಎಂದು ಮಧುಗಿರಿ ವಿಕಾಸ ಸಮಿತಿಯ ಅಧ್ಯಕ್ಷ ಹಾಗೂ ಚಿತ್ರದುರ್ಗ ಜಿಲ್ಲಾ ಭಾಜಪ ಯುವ ಮೋರ್ಚಾ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಕಾರ ಮರಡಿ ಗ್ರಾಮದಲ್ಲಿ ಕಾಲಭೈರವೇಶ್ವರ ಏಳು ಮಂದಮ್ಮ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಪೂಜೆ, ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇವಸ್ಥಾನಗಳಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರಕುತ್ತದೆ. ತಾಲ್ಲೂಕಿನ ಬಹಳಷ್ಟು ದೇವಸ್ಥಾನಗಳಿಗೆ ಎಲೆರಾಂಪುರದ ಕುಂಚಿಟಿಗ ಮಠ ತನ್ನದೇ ಆದ ಕೊಡುಗೆ ನೀಡಿರುವುದನ್ನು ಸ್ಮರಿಸಿದ ಅವರು, ಧಾರ್ಮಿಕತೆಯ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಪ್ರತಿ ಗ್ರಾಮಗಳಲ್ಲಿ ದೇವಸ್ಥಾನಗಳು ಶಾಲೆ ಅತ್ಯವಶ್ಯ ಎಂದರು.
ಈ ಸಂದರ್ಭದಲ್ಲಿ ಎಲೆ ರಾಂಪುರದ ಕುಂಚೆಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ, ನಿವೃತ್ತ ಡಿವೈಎಸ್‌ಪಿ ಭೈರಪ್ಪ, ಗುತ್ತಿಗೆದಾರ ಕಾರ ಮರಡಿ ಮಹೇಶ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.