ಧಾರ್ಮಿಕತೆಯಲ್ಲಿ ರಾಜ್ಯದಲ್ಲಿಯೇ ವಿಶೇಷ ಸ್ಥಾನವನ್ನು ಪಡೆದ ಜಗಳೂರು ತಾಲ್ಲೂಕು

ಜಗಳೂರು. ರಾಜ್ಯದಲ್ಲಿ ಕೂಡ್ಲಿಗಿ, ಮೊಳಕಾಲ್ಮೂರು, ಜಗಳೂರು ಬರಪೀಡಿತ ಪ್ರದೇಶಗಳೆಂಬ ಹಣೆಪಟ್ಟಿ ಹೊಂದಿದ್ದು, ತಾಲ್ಲೂಕು ಹಣದಿಂದ ಬಡತನವಿದ್ದರೂ, ಮಳೆಯಿಂದ ಬೆಳೆಗಳ ನಷ್ಟವುಂಟಾದರೂ ಸಹ ಸಾಹಿತ್ಯ, ಕಲೆ, ಸಂಗೀತ, ಧಾರ್ಮಿಕತೆಯಲ್ಲಿ ರಾಜ್ಯದಲ್ಲಿಯೇ ವಿಶೇಷ ಸ್ಥಾನವನ್ನು ಪಡೆದಿದೆ ಎಂದು ತಾಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ವಿರಶೈವ ಕಲ್ಯಾಣ ಮಂಟಪದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಎರಡನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದರು. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಧ್ಯಾತ್ಮಿಕತೆಯ ನೆಲೆಗಟ್ಟಿನಲ್ಲಿ ನಿಂತಿರುವ ಭಾರತವು ವಿಶ್ವಕ್ಕೆ ಗುರುವಾಗಿ ಮೆರೆದಿದ್ದು, ಇಲ್ಲಿ ಹುಟ್ಟಿರುವ ನಾವುಗಳೇ ಭಾಗ್ಯಶಾಲಿಗಳು. ಪ್ರತಿಯೊಬ್ಬರೂ ಫಲಾಪೇಕ್ಷೆಯಿಲ್ಲದೆ ಪರೋಪಕಾರ ಮನೋಭಾವನೆಯನ್ನು ಬೆಳೆಸಿಕೊಂಡರೆ ಪುಣ್ಯ ಪ್ರಾಪ್ತಿಯಾಗಿ ಸದ್ಗತಿಯನ್ನು ಪಡೆಯ ಬಹುದಾಗಿದೆ. ಮನುಷ್ಯನ ಜೀವನದಲ್ಲಿ ಹಲವಾರು ದುಃಖಗಳಿದ್ದು, ಅಧಿಕಾರ ದುಃಖ, ವ್ಯಾಮೋಹ ದುಃಖ, ಸಂಸಾರ ದುಃಖಗಳಾಗಿ ನಮ್ಮಲ್ಲಿ ಹುದುಗಿರುತ್ತವೆ ಎಂದರು. ಪರಿಸ್ಥಿತಿ ನನಗೆ ಜೀವನದಲ್ಲಿ ಪಾಠ ಕಲಿಸಿತು:ಪ್ರೊ.ಲಿಂಗಪ್ಪ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಲ್ಲಿನ ಬಡತನದಲ್ಲಿ ಹಸಿವು ತಾಂಡವವಾಡುತ್ತಿದ್ದರೂ ಅಕ್ಷರ ಕಲಿತು ಸರಕಾರಿ ನೌಕರನಾದೆ. ನನ್ನ ತಾಯಿ ಜೀತದಿಂದ ನಮ್ಮ ಕುಟುಂಬ ನಿರ್ವಹಣೆ ಪರಿಸ್ಥಿತಿ ನನಗೆ ಜೀವನದಲ್ಲಿ ಪಾಠ ಕಲಿಸಿತು. ಇಂದು ನನಗೆ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ದೊರೆತಿದ್ದು, ಭಾರತರತ್ನ ಡಾ.ಬಿ.ಆರ್.ಅಂಬೇಢ್ಕರ್ ಅವರ ಸಂವಿಧಾನದ ಫಲ. ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ನನ್ನ ಕೀರ್ತಿ ಹೆಚ್ಚಿಸಿತು. ನನ್ನ ಆರಂಭದ ವೃತ್ತಿ ಬದುಕಿನ ಅಳಲು ಹೇಳತೀರದು ಎಂದು ಭಾವುಕರಾದರು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, 2 ದಶಕಗಳ ನಂತರ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದ್ದು, ತಾಲ್ಲೂಕು ಹಲವಾರು ವಿಶೇಷತೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕೊಣಚಗಲ್‌ನಲ್ಲಿರುವ ಅನುಭಾವ ಕವಿ ಮಹಾಲಿಂಗ ರಂಗ ಅವರ ಸಮಾಧಿಯನ್ನು ಅಭಿವೃದ್ಧಿಗೊಳಿಸಬೇಕಿದೆ. ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳನ್ನು ಹೊಂದಿರುವ ಕ್ಷೇತ್ರವಾಗಿದೆ. ಕನ್ನಡಪರ ಸಂಘಟನೆಗಳು ಸಾಮಾಜಿಕ ಚಿಂತನೆ ಮೈಗೂಡಿಸಿಕೊಂಡಿವೆ. ಸಾಹಿತ್ಯ ಲೋಕಕ್ಕೆ ತಾಲ್ಲೂಕಿನ ಹೆಚ್ಚು ಪ್ರತಿಭೆಗಳು ಪದಾರ್ಪಣೆಯಾಗಲಿ. ತಾಲ್ಲೂಕಿನ ಜನರು ಅಭಿವೃದ್ಧಿ ಹೊಂದಬೇಕಾದರೆ ಶೀಘ್ರವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗುವುದು ಅತ್ಯವಶ್ಯವಾಗಿದ್ದು, ಇದುವರೆಗೂ ಕಾಲುವೆಯ ಮಾರ್ಗದ ಬಗ್ಗೆ ಅಧಿಕಾರಿಗಳಿಗೆ ಪರಿಚಯವಿಲ್ಲದಿರುವುದು ಶೋಚನೀಯ ಸಂಗತಿಯಾಗಿದೆ. ಸಂಘಟನೆಗಳ ಹೋರಾಟದ ಕನಸಿನ ಯೋಜನೆ ತಾಲ್ಲೂಕಿನ ಜನರ ಬಹುದಿನದ ಮಹಾತ್ವಾಕಾಂಕ್ಷೆ ಯೋಜನೆ ನೆನೆಗುದಿಗೆ ಬಿದ್ದಿದೆ. ಯಾವ ಮಾರ್ಗ ಎಂಬುದು ಗೊಂದಲವಿದೆ. ಆಡಳಿತ ಸರಕಾರವಿರುವ ಹಾಲಿ ಶಾಸಕರು ಕಾಳಜಿವಹಿಸಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಪ್ಲೋರೈಡ್‌ಮುಕ್ತನ್ನಾಗಿಸುವ ಕೆಲಸ ತ್ವರಿತವಾಗಿ ಆಗಬೇಕಿದೆ ಎಂದರು.