
ಕಲಬುರಗಿ,ಸೆ.4: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳ, ಕೊಳ್ಳಗಳು, ಕೆರೆ, ಕುಂಟೆಗಳು, ನದಿಗಳು ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ನಡುವಿನ ಶ್ರಾವಣ ಸೋಮವಾರವಾಗಿದ್ದರಿಂದ ಲಕ್ಷಾಂತರ ಭಕ್ತರು ನಗರದ ಪ್ರಸಿದ್ಧ ಶ್ರೀ ಶರಣಬಸವೇಶ್ವರ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಧಾರಕಾರ ಮಳೆಯಿಂದಾಗಿ ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಹತ್ತಿರ ಇರುವ ಲಾಲ್‍ಗಿರಿ ಕ್ರಾಸ್‍ನಲ್ಲಿ ಮಳೆ ನೀರಿನಿಂದ ಸಂಚಾರಕ್ಕೆ ಅಸ್ತವ್ಯಸ್ತವಾದರೂ ಸಹ ನಡುವಿನ ಸೋಮವಾರವಾಗಿದ್ದರಿಂದ ಭಕ್ತರು ಅದನ್ನು ಲೆಕ್ಕಿಸದೇ ಛತ್ತಿಗಳೊಂದಿಗೆ ದೇವಸ್ಥಾನಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಮಳೆಯಿಂದಾಗಿ ಭಕ್ತರ ರಕ್ಷಣೆಗಾಗಿ ಮೊದಲೇ ಶಾಮಿಯಾನ್‍ನನ್ನು ಹಾಕಲಾಗಿತ್ತು. ಹೀಗಾಗಿ ಉದ್ದನೆಯ ಸಾಲಿನಲ್ಲಿ ಶಾಮಿಯಾನ್‍ನಲ್ಲಿಯೇ ನಿಂತು ಭಕ್ತರು ದರ್ಶನ ಪಡೆದುಕೊಂಡರು. ಇಡೀ ದೇವಸ್ಥಾನದಲ್ಲಿ ಭಜನಾ ಮಂಡಳಿಗಳು ಭಜನೆಗಳು ಮೊಳಗಿದವು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳೆಯರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದಲ್ಲಿ ಸೇರಿದ್ದು ಕಂಡುಬಂತು.
ಮಹಿಳೆಯರಿಗೆ ರಾಜ್ಯ ಸರ್ಕಾರವು ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದರಿಂದ ಮಹಿಳೆಯರ ಸಂಖ್ಯೆ ದೇವಸ್ಥಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂಡುಬಂತು. ಹಲವಾರು ಭಕ್ತರು ಬರಿಗಾಲಲ್ಲಿ ಬಂದು ನೈವೇದ್ಯ ಅರ್ಪಿಸಿದ್ದು ಕಂಡುಬಂತು.
ಈ ಬಾರಿ ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ್, ಗದಗ್, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ದೇವಸ್ಥಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು.
ಅನ್ನಸಂತರ್ಪಣೆ: ನಗರದ ಶ್ರೀ ಮಹಾದಾಸೋಹಿ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮೂರನೇ ಸೋಮವಾರ ಶ್ರಾವಣ ಮಾಸದ ನಿಮಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಹೋರಾಟಗಾರ ಲಕ್ಷ್ಮಣ್ ದಸ್ತಿ, ಸಂಘದ ಅಧ್ಯಕ್ಷ ಭೀಮಾಶಂಕರ್ ಕಂದಳ್ಳಿ, ಪ್ರಧಾನ ಕಾರ್ಯದರ್ಶಿ ಪರೆಪ್ಪ ರತನ್ನಡಗಿ, ಗೌರವ ಅಧ್ಯಕ್ಷ ರಾಜು ಜಮಾದಾರ್, ಉಪಾಧ್ಯಕ್ಷ ಶಿವಕುಮಾರ್ ಬೆಳೆಗೆರಿ, ಮುರಳಿ ಗುತ್ತೇದಾರ್, ಮಹಾಂತೇಶ್, ದೇವಿಂದ್ರ, ಶರಣು, ಚಂದ್ರು, ಮಲ್ಲು ಮುಂತಾದವರು ಉಪಸ್ಥಿತರಿದ್ದರು.