ಧಾರಾಕಾರ ಮಳೆ ಮುಂದುವರೆದರೆ ಬೆಳೆ ನಾಶ ಆತಂಕದಲ್ಲಿ ರೈತ

ಕಾಳಗಿ.ಜು.22. ಮುಂಗಾರಿನ ಮಳೆ ಕೈಕೊಟ್ಟಿತೆಂದು ಬಿತ್ತನೆ ಮಾಡದೆ ಮುಗಿಲು ನೋಡುತ್ತ ಕುಳಿತಿರುವ ರೈತರ ಪಾಲಿಗೆ ತಡವಾಗಿಯಾದರೂ ಕರುಣೆ ತೋರಿದ ವರುಣರಾಯ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತ ಕಂಗಾಲಾಗಿದ್ದಾನೆ.
ಭೂಮಿತಾಯಿಯ ಬೀಜ ಭೂಮಿಗೆ ಬೀಳಿಸೋಣ ಎಂದು ತಡವಾಗಿಯಾದರೂ ಪರವಾಗಿಲ್ಲವೆಂದು ಬಿತ್ತನೆ ಕಾರ್ಯ ಮುಗಿಸಿ ಕುಳಿತಿದ್ದಾನೆ.
ಈಗತಾನೆ ಮೊಳಕೆಯೊಡೆದು ಬೆಳೆಗಳು ಸಾಲು ಕಾಣುವಷ್ಟರಲ್ಲಿ ಎಡೆಬಿಡದೆ ಜಡಿಯುತ್ತಿರುವ ಮಳೆಯಿಂದ ಮೊಳಕೆಯೊಡೆಯುವ ತೊಗರಿ ಬೆಳೆಗಳು ಕೊಳೆತು ಹಳದಿ ಬಣ್ಣಕ್ಕೆ ಇಳಿದು ನಾಶವಾಗುವ ಲಕ್ಷಣಗಳಿವೆ ಎಂದು ರೈತರು ಆತಂಕದಲ್ಲಿದ್ದಾರೆ.
ಧಾರಾಕಾರದ ಮಳೆಯಿಂದ, ಬಿತ್ತನೆ ಮಾಡಿದ ಹೊಲಗಳಲ್ಲಿ ಜಾಸ್ತಿ ನೀರು ನಿಂತಿರುವುದರಿಂದ ಕಳೆ ತೆಗೆಯುವುದು, ಎಡಿ ಹೊಡೆಯುವುದು ಅಸಾಧ್ಯದ ಮಾತು.
ಇದೇ ಪ್ರಕಾರ ಇನ್ನೆರಡು ದಿನಗಳು ಮಳೆ ಸುರಿಯುತ್ತಿದ್ದರೆ, ಕೈಗೆಟುಕುವ ಅಲ್ಪ-ಸ್ವಲ್ಪ ಬೆಳೆಗಳು ಕೂಡ ಕೈಗೆ ಸಿಗದೆ ರೈತರ ಬಾಳು ಅಧೋಗತಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಇಲ್ಲಿಯ ಪ್ರಗತಿಪರ ರೈತ ಮಲ್ಲಣ್ಣ ಕುಡ್ಡಳ್ಳಿ ಆತಂಕ ವ್ಯಕ್ತಪಡಿಸಿದ್ದಾರೆ. ಜನತೆಗೆ ಮನೆಯಿಂದ ಹೊರಹೋಗುವುದಕ್ಕೂ ಸಹ ಅವಕಾಶ ನೀಡಿದ ಈ ವರುಣಾರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ.

  ಬಸವನ ಹುಳುಗಳ ಕಾಟ:

ಅಲ್ಪ-ಸ್ವಲ್ಪ ಚಿಗುರೊಡೆಯುತ್ತಿರುವ ಹೆಸರು-ಉದ್ದು, ತೊಗರಿ ಬೆಳೆಗಳ ಮುಗುಳನ್ನೇ ಕತ್ತರಿಸಲು ಪ್ರಾರಂಭ ಮಾಡಿರುವುದರಿಂದ ರೈತರಿಗೆ ಧೈರ್ಯವಿಲ್ಲದಂತಾಗಿದೆ.