ಧಾರಾಕಾರ ಮಳೆ : ಮನೆಗಳು ಜಲಾವೃತ, ಉರುಳಿಬಿದ್ದ ಅಡಕೆ ಮರಗಳು!

ಶಿವಮೊಗ್ಗ, ಮೇ 5: ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಯಿತು. ಇದಿರಂದ ಶಿಕಾರಿಪುರ ಪಟ್ಟಣದಲ್ಲಿ ಹಲವು ಮನೆಗಳು ಜಲಾವೃತವಾದರೆ, ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಸುಮಾರು 50 ಕ್ಕೂ ಅಧಿಕ ಅಡಕೆ ಮರಗಳು ಉರುಳಿಬಿದ್ದವು.
ಜಲಾವೃತ: ಶಿಕಾರಿಪುರ ಪಟ್ಟಣದ ಜಯನಗರ ಬಡಾವಣೆಯಲ್ಲಿ ಧಾರಾಕಾರ ವರ್ಷಧಾರೆಗೆ ತಗ್ಗು ಪ್ರದೇಶಗಳಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಯಿತು. ದಿಢೀರ್ ನುಗ್ಗಿದ ನೀರಿನಿಂದ, ಆಹಾರ ಧಾನ್ಯ ಸೇರಿದಂತೆ ಮತ್ತೀತರ ವಸ್ತುಗಳು ಹಾಳಾಗಿವೆ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಉರುಳಿದ ಮರಗಳು: ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದ ಮಂಜುನಾಥ್ ಎಂಬುವರಿಗೆ ಸೇರಿದ ತೋಟದಲ್ಲಿ ಬಿರುಗಾಳಿ ಮಳೆಗೆ ಸುಮಾರು 50 ಕ್ಕೂ ಅಧಿಕ ಅಡಕೆ ಮರ, ನಾಲ್ಕು ತೆಂಗು ಹಾಗೂ ಎರಡು ಮಾವಿನ ಮರಗಳು ಉರುಳಿಬಿದ್ದಿದೆ. ಇದರಿಂದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆ: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಕೆಲವೆಡೆ ಭಾರೀ ಗುಡುಗು, ಬಿರುಗಾಳಿ ಸಹಿತ ವರ್ಷಧಾರೆಯಾಗುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಉಂಟಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಯಿತು. ಇದರಿಂದ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ದೃಶ್ಯ ಕಂಡುಬಂದಿತು. ನಗರದ ಗೋಪಿ ವೃತ್ತದಲ್ಲಿ ಬೃಹತ್ ಜಾಹೀರಾತು ಫಲಕವೊಂದು ಟ್ರಾನ್ಸ್’ಫಾಮರ್ಾರ್ ಮೇಲೆ ಬಿದ್ದ ಘಟನೆ ನಡೆಯಿತು.
ಇದರಿಂದ ಈ ಭಾಗದ ಸುತ್ತಮುತ್ತ ಕೆಲ ಸಮಯ ವಿದ್ಯುತ್ ವ್ಯತ್ಯಯವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ಜಾಹೀರಾತು ಫಲಕ ತೆರವುಗೊಳಿಸಿ, ಟ್ರಾನ್ಸ್’ಫಾಮರ್ಾರ್ ದುರಸ್ತಿಗೊಳಿಸಿದರು.