ಧಾರಾಕಾರ ಮಳೆ: ಬೆಂಗಳೂರಿನಲ್ಲಿ ಅವಾಂತರ

ಬೆಂಗಳೂರು.ಮೇ.೧೯- ನಿನ್ನೆ ಧಾರಾಕಾರ ಮಳೆಗೆ ನಗರದಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ.ನಗರದ ಹಲವಡೆ ನಿನ್ನೆ ರಾತ್ರಿ ಜೋರು ಮಳೆಯಾಗಿದ್ದು ನಂದಿನಿ ಬಡಾವಣೆ, ವಿದ್ಯಾರಣ್ಯಪುರದಲ್ಲಿ ಭರ್ಜರಿ ಮಳೆಯಾಗಿದ್ದರಿಂದ ರಸ್ತೆಗಳು ಜಲಾವೃತಗೊಂಡವು.ಯಲಹಂಕದ ನಾರ್ಥ್‌ಹುಡ್ ಅಪಾರ್ಟ್‌ಮೆಂಟ್‌ನ ಸುತ್ತಮುತ್ತ ನೀರು ತುಂಬಿಕೊಂಡಿದೆ. ಒಂದು ವಾರದಿಂದ ರಾಜಕಾಲುವೆಯಿಂದ ನೀರು ಹರಿಯುತ್ತಿದೆ.ಸ್ಟಾರ್ಮ್ ವಾಟರ್ ಡ್ರೇನ್ ತೆರೆದಿರುವುದರಿಂದ ಸಮಸ್ಯೆಯಾಗಿದೆ ಇಲ್ಲಿನ ನಿವಾಸಿಗಳು ದೂರಿದ್ದಾರೆ.ರಾಜಕಾಲುವೆಯಿಂದ ಬರುತ್ತಿರುವ ನೀರಿನ ವಾಸನೆಗೆ ಜನ ಹೈರಾಣ ಆಗಿದ್ದು ವಾಸನೆ ತಾಳಲಾರದೇ ಮನೆ ಖಾಲಿ ಮಾಡಿ ಹೋಗಿದ್ದಾರೆ.
ಮೋಟರ್ ಮೂಲಕ ನೀರು ಹೊರಹಾಕಲು ಹರಸಾಹಸ ಪಡಲಾಗುತ್ತಿದೆ. ಬಿಬಿಎಂಪಿಗೆ ವಾರದ ಮುಂಚೆ ಪತ್ರ ಬರೆಯಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿಲ್ಲ.
ರಾಜಕಾಲುವೆಯಲ್ಲಿ ನೀರು ತುಂಬಿರುವುದರಿಂದ ೨೨ ಮನೆಗಳಗೆ ಸಂಕಷ್ಟ ಎದುರಾಗಿದ್ದು ಇಡೀ ಪ್ರದೇಶ ಕೆರೆಯಂತಾಗಿದೆ.ರಾತ್ರಿ ೧೧ಗಂಟೆಗೆ ನಂದಿನಿ ಬಡಾವಣೆಯಲ್ಲಿ ೪೯ಮಿ.ಮೀ. ಮಳೆಯಾಗಿದೆ.ಉಳಿದಂತೆ ಯಲಹಂಕದಲ್ಲಿ ೪೪ ಮಿ.ಮೀ., ಬಾಗಲಗುಂಟೆ ೩೯ ಮಿ.ಮೀ., ಶೆಟ್ಟಿಹಳ್ಳಿ ೩೯ ಮಿ.ಮೀ, ಮಾರಪ್ಪನಪಾಳ್ಯ ೩೯ಮಿ.ಮೀ, ವಿದ್ಯಾರಣ್ಯಪುರ ೩೮ಮಿ.ಮೀ, ನಾಗಪುರ ೩೨ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ ೨೯ ಮಿ.ಮೀ, ಚೌಡೇಶ್ವರಿ ವಾರ್ಡ್ ೨೩.೫೦ ಮಿ.ಮೀ, ಕೊಟ್ಟಿಗೆಪಾಳ್ಯ ೧೮ ಮಿ.ಮೀ, ರಾಜಾಜಿನಗರ, ಚೊಕ್ಕಸಂದ್ರದಲ್ಲಿ ತಲಾ ೧೬.೫ ಮಿಲಿ ಮೀಟರ್ ಮಳೆ ದಾಖಲಾಗಿದೆ.ಮರ ಬಿದ್ದು ನಾಶ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಎಲ್ಲ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಳೆಗೆ ಕಾಂಪೌಂಡ್ ಕುಸಿದು ೫ ಬೈಕ್, ೨ ಸೈಕಲ್ ಜಖಂ ಆಗಿದೆ.ಮಂಡ್ಯದಲ್ಲಿ ಭಾರೀ ಮಳೆ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಕೆ.ಆರ್.ಪೇಟೆ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಶೀಳನೆರೆ, ಮುರುಕನಹಳ್ಳಿ, ಮರಡಹಳ್ಳಿ, ಜಕ್ಕನಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಮಳೆಗೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.
ತುಮಕೂರಿನಲ್ಲಿ ದವಸ ಧಾನ್ಯ ಹಾನಿ
ಕಲ್ಪತರನಾಡು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ಅವಾಂತರ ತಂದೊಡ್ಡಿದೆ. ಭಾರಿ ಮಳೆಯಿಂದ ಮನೆಯೊಳಗೆ ಚರಂಡಿ ನೀರು ನುಗ್ಗಿದ್ದು ಮನೆಯಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯ ಹಾನಿಯಾಗಿದೆ. ಗೌರಿಬಿದನೂರು-ಕೊರಟಗೆರೆ ಹೆದ್ದಾರಿ ಎತ್ತರ ಹೆಚ್ಚಿಸಿ ಚರಂಡಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆ ಅವಾಂತರ ಸೃಷ್ಟಿಯಾಗಿದೆ.ಇದೇ ವೇಳೆ ರಸ್ತೆ ಕುಸಿದು ವಾಹನ ಪಲ್ಟಿಯಾಗಿದ್ದು ಚಾಲಕನಿಗೆ ಗಾಯಗಳಾಗಿವೆ. ಗಾಯಾಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೋಟೆನಾಡಿನಲ್ಲಿ ಕೆಲ್ಲೋಡು ಸೇತುವೆ ಭರ್ತಿ
ಕೋಟೆನಾಡಿನಲ್ಲಿ ಕಳೆದ ೨ ದಿನದಿಂದ ಭಾರಿ ಮಳೆ ಹಿನ್ನೆಲೆ ಕೆಲ್ಲೋಡು ಸೇತುವೆ ಭರ್ತಿಯಾಗಿ ಹರಿಯುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಸೇತುವೆ ತುಂಬಿ ವಾಣಿ ವಿಲಾಸ ಸಾಗರ ಡ್ಯಾಂ ಕಡೆಗೆ ನೀರು ಹರಿಯುತ್ತಿದೆ. ಬಯಲುಸೀಮೆ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಇನ್ನು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮೇಗಳ ಕಣಿವೆ ಅರಣ್ಯ ಪ್ರದೇಶದಲ್ಲಿ ಜಲಪಾತ ಸೃಷ್ಠಿಯಾಗಿದೆ.