ಧಾರಾಕಾರ ಮಳೆ: ತುಂಬಿ ಹರಿದ ಹಳ್ಳ

ಲಕ್ಷ್ಮೇಶ್ವರ,ಜು.30: ತಾಲೂಕಿನ ಹುಲ್ಲೂರು, ನೆಲೂಗಲ್ಲ ಗ್ರಾಮಗಳ ಸುತ್ತ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೆಲೂಗಲ್ಲ ಸಮೀಪದ ಹೆದ್ದಾರಿಯ ಮೇಲೆ ಭಾರಿ ಪ್ರಮಾಣದ ನೀರು ಬಂದಿದ್ದರಿಂದ ಹಳ್ಳದ ನೀರಿನ ಪ್ರವಾಹ ತಗ್ಗುವವರೆಗೆ ರಸ್ತೆಯ ಎರಡು ಬದಿಗೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಮೇ ತಿಂಗಳದಲ್ಲಿ ಸುರಿದ ಧಾರಾಕಾರ ಮಳೆಗೆ ನೆಲೂಗಲ್ಲ ಸಮೀಪದ ಹಳ್ಳದಲ್ಲಿ ಪ್ರವಾಹ ಉಂಟಾಗಿ ಕಾರೊಂದು ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಗ್ರಾಮಸ್ಥರ ಸಕಾಲಿಕ ಆಗಮನದಿಂದ ಬಚಾವಾಗಿತ್ತು.
ಬುಧವಾರ ರಾತ್ರಿ ಸುರಿದ ಮಳೆಯಿಂದ ಬೆಳಿಗ್ಗೆ ಬೆಳ್ಳಟ್ಟಿ, ಬನ್ನಿಕೊಪ್ಪ, ಮುಂಡರಗಿ ಹಾಗೂ ಸುರಣಿಗಿ ದೊಡ್ಡೂರು, ಲಕ್ಷ್ಮೇಶ್ವರಗಳಿಗೆ ಬರುವ ಜನರು ಪರದಾಡುವಂತಾಯಿತು.
ಈ ಕುರಿತು ನೆಲೂಗಲ್ಲ ಗ್ರಾಮದ ಫಕೀರಗೌಡ ಪಾಟೀಲ, ಮುತ್ತು ಬಾನೂರ, ಕಾರ್ತಿಕ ಹುಲ್ಲೂರ ಅವರು ಪ್ರತಿಕ್ರಿಯೆ ನೀಡಿ ಜನ ಪ್ರತಿನಿಧಿಗಳಿಗೆ ಈಗಿರುವ ಕಲ್ಲಿನ ಪರ್ಷಿಯನ್ನು ತೆಗೆದು ಕಿರು ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಮುಂದಿನ ಮಳೆಗಾಲದಲ್ಲಾದರೂ ಕಿರು ಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.