ಧಾರಾಕಾರ ಮಳೆಗೆ ಮನೆ ಗೋಡೆ-ಸೇತುವೆ ಕುಸಿತ

ಕುಣಿಗಲ್, ಆ. ೩- ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆಯ ಗೋಡೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್ ಹಾಗೂ ಸೇತುವೆ ಕುಸಿತಗೊಂಡಿದ್ದು, ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಭಾರೀ ಮಳೆಯಿಂದಾಗಿ ಪಟ್ಟಣದ ಬೈರಾಗಿ ಮಠ ಬೀದಿಯ ರೇವಣ್ಣ ಅವರಿಗೆ ಸೇರಿದ ಮನೆಯ ಗೋಡೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್, ಸೇತುವೆ ಸಂಪೂರ್ಣವಾಗಿ ಕುಸಿದಿದ್ದು, ರಸ್ತೆ ಹಾಳಾಗಿದೆ, ಇದರಿಂದ ಕಾಲೇಜಿಗೆ ವಿದ್ಯಾರ್ಥಿಗಳು ಹೋಗಲು ತೊಂದರೆ ಉಂಟಾಗಿದೆ. ಕಾಲೇಜು ಮುಂಭಾಗದ ಚರಂಡಿಯಲ್ಲಿ ಮಳೆಯ ನೀರು ಬೊರ್ಗರೆಯುತ್ತಿದೆ. ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ಹರಿದು ವಾಹನಗಳ ಸಂಚಾರಕ್ಕೆ ನಾಗರಿಕರು ತಿರುಗಾಡಲು ತೊಂದರೆ ಉಂಟಾಗಿತ್ತು.
ಪಟ್ಟಣದ ಮಿಷನ್ ಕಾಂಪೌಂಡ್, ಹೌಸಿಂಗ್ ಬೋರ್ಡ್ ಕಾಲೋನಿ ಮೊದಲಾದ ತಗ್ಗು ಪ್ರದೇಶ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನರು ನೀರು ಹೊರ ಹಾಕುವ ಕೆಲಸದಲ್ಲಿ ತೊಡಗಿದರು.
೨೨ ವರ್ಷದ ನಂತರ ಚಿಕ್ಕಕೆರೆ ಕೋಡಿ
ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಕೆರೆ ೨೨ ವರ್ಷದ ಬಳಿಕ ಸಂಪೂರ್ಣವಾಗಿ ತುಂಬಿ ಭರ್ತಿಯಾಗಿ ಕೋಡಿ ಬಿದ್ದಿರುವುದು ಈ ಭಾಗದ ನಾಗರಿಕರ ಹಾಗೂ ರೈತರ ಸಂತಸಕ್ಕೆ ಕಾರಣವಾಗಿದೆ.
ಮೂಡಲ್ ಕುಣಿಗಲ್ ಕೆರೆ ನೋಡೋಕೆ ಒಂದು ವೈಭೋಗ ಮೂಡಿ ಬರುತ್ತಾನೆ ಚಂದಿರಾಮ ಎಂಬ ಜಾನಪದ ಗೀತೆ ಒಳಗೊಂಡಿರುವ ಐತಿಹಾಸಿಕ ಹೆಸರಾಂತ ಕುಣಿಗಲ್ ದೊಡ್ಡಕೆರೆ ಕೋಡಿ ಬಿದ್ದಿದೆ.
೨೦ ಸಾವಿರ ಕ್ಯೂಸೆಕ್ಸ್ ಒಳ ಹರಿವು
ದಿನೇ, ದಿನೇ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ತುರುವೇಕೆರೆ ಸೇರಿದಂತೆ ಮೊದಲಾದ ಕೆರೆಗಳು ತುಂಬಿ ಕೋಡಿ ಬಿದ್ದಿರುವ ಕಾರಣ ಮಾರ್ಕೋನಹಳ್ಳಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಸೋಮವಾರ ಜಲಾಶಯಕ್ಕೆ ೬೫೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು. ಆದರೆ ಮಂಗಳವಾರ ೨೦ ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಈ ಪ್ರಮಾಣದ ನೀರನ್ನು ಶಿಂಷಾ ನದಿಗೆ ಹರಿದು ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.