ಧಾರಾಕಾರ ಮಳೆಗೆ ಜಮೀನುಗಳು ಜಲಾವೃತ: ಕೊಚ್ಚಿಹೋದ ಮೀನುಗಳು

ಲಕ್ಷ್ಮೇಶ್ವರ,ಆ30: ತಾಲೂಕಿನಾದ್ಯಂತ ರವಿವಾರ ಸಂಜೆಯಿಂದ ಮಧ್ಯರಾತ್ರಿಯವರೆಗೂ ಸುಮಾರು ನಾಲ್ಕೈದು ತಾಸು ಭಾರಿ ಮಳೆ ಸುರಿದಿದೆ.
ತಾಲೂಕಿನ ಎಲ್ಲಾ ಹಳ್ಳಗಳು ಕೆರೆ-ಕಟ್ಟೆಗಳು ಕೋಡಿ ಬಿದ್ದಿದ್ದು ಅನೇಕ ಕಡೆ ಮಧ್ಯರಾತ್ರಿಯಿಂದ ಬೆಳಗಿನ 11:12 ಗಂಟೆಯವರೆಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದವು.
ತಾಲೂಕಿನ ಅತ್ಯಂತ ದೊಡ್ಡ ಕೆರೆಯಾದ ಸಣ್ಣ ನೀರಾವರಿ ಇಲಾಖೆಯ 124 ಎಕರೆ ಶೆಟ್ಟಿ ಕೇರಿ ಕೆರೆ ಧಾರಾಕಾರ ಮಳೆಗೆ ಕೋಡಿ ಬಿದ್ದಿದ್ದು ಕೆರೆಯಿಂದ ಹೊರ ಬರುತ್ತಿರುವ ಭಾರಿ ಪ್ರಮಾಣದ ನೀರು ಸಾವಿರಾರು ಎಕರೆ ಜಮೀನುಗಳಲ್ಲಿ ನುಗ್ಗಿ ಬೆಳೆಗಳು ಜಲಾವೃತಗೊಂಡಿದ್ದು ಒಂದು ಕಡೆಯಾದರೆ ಕೆರೆಯಲ್ಲಿ ಗೋರ ಬಂಜಾರ ಮೀನುಗಾರಿಕಾ ಸಹಕಾರಿ ಸಂಘದಿಂದ ಸುಮಾರು 15 ಲಕ್ಷ ಮೀನುಗಳನ್ನು ಬಿಟ್ಟಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ.
ಈ ಕೆರೆಗೆ ಶಿರಹಟ್ಟಿಯ ಕಡಪರಿ ಹಳ್ಳ, ಕರಗೇನಹಳ್ಳ, ತೆರೆಪೇನ ಹಳ್ಳ ಈ ಮೂರೂ ಹಳ್ಳದ ನೀರು, ಶೆಟ್ಟಿಕೆರೆಗೆ ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ 20 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಕೋಡಿಬಿದ್ದು ಕೆರೆಯ ನೀರು ಎಲ್ಲೆಂದರಲ್ಲಿ ಜಮೀನುಗಳಲ್ಲಿ ನುಗ್ಗಿ ಹತ್ತಿ, ಸೋಯಾ, ಗೋವಿನ ಜೋಳ ಬೆಳೆಗಳಿಗೆ ಹಾನಿ ಮಾಡಿದೆ ಅಲ್ಲದೆ ಮೀನುಗಳು ಸಹ ಕೈಗೆ ಸಿಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಹಾನಿ ಅನುಭವಿಸುತ್ತಿದ್ದಾರೆ.
ಶಿವಮೊಗ್ಗ ಹೊಸಪೇಟೆಗಳಿಂದ ಸುಮಾರು 15ಲಕ್ಷ ಮೀನು ಮರಿಗಳನ್ನು ತಂದು ಶೆಟ್ಟಿಕೆರೆಯಲ್ಲಿ ಬಿಡಲಾಗಿತ್ತು ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿತ್ತು ಆದರೆ ಈ ಮೀನುಗಾರಿಕೆಯಿಂದ ಸುಮಾರು 30 ರಿಂದ 40 ಲಕ್ಷ ರೂಗಳ ಆದಾಯವನ್ನು ನಿರೀಕ್ಷಿಸಲಾಗಿತ್ತು ಈಗ ಎಲ್ಲವೂ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ ಎಂದು ಗೋರ್ ಬಂಜಾರ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ದೀಪಕ ಲಮಾಣಿ ಹೇಳಿದರಲ್ಲದೆ ಮೀನುಗಾರಿಕಾ ಇಲಾಖೆಯವರು ಕೂಡಲೇ ಸಂಘದ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೆರೆಗೆ ಕಂದಾಯ ಇಲಾಖೆಯ ನಿರೀಕ್ಷಕ ಬಿ.ಎಂ. ಕಾತ್ರಾಳ ಗ್ರಾಮ ಲೆಕ್ಕಾಧಿಕಾರಿಗಳಾದ ಹವಳದ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಗೋರ ಬಂಜಾರ ಮೀನುಗಾರಿಕಾ ಸಹಕಾರಿ ಸಂಘದ ಕಾರ್ಯದರ್ಶಿ ಕಿರಣ ಲಮಾಣಿ ಇದ್ದರು.