ಧಾರವಾಡ: ಮತ ಎಣಿಕೆ ಕಾರ್ಯ ಸುವ್ಯವಸ್ಥಿತ

ಹುಬ್ಬಳ್ಳಿ, ಡಿ 30- ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು ಧಾರವಾಡ ಜಿಲ್ಲೆಯ ಏಳು ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಸುವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದಲ್ಲಿ ಲ್ಯಾಮಿಂಗ್ಟನ್ ಶಾಲೆಯ ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮತ ಎಣಿಕಾ ಕಾರ್ಯ ಸುವ್ಯವಸ್ಥಿತವಾಗಿ ನಡೆದಿದೆ. ಆಯಾ ತಾಲೂಕಾ ಮತ ಎಣಿಕಾ ಕೇಂದ್ರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಮತ ಎಣಿಕಾ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ ಎಂದರು.
ಕೆಲ ಮತ ಎಣಿಕಾ ಕೇಂದ್ರಗಳಲ್ಲಿ ಒಂದೊಂದು ಕಡೆ ಇಬ್ಬರು ಎಜೆಂಟರು ಬಂದಿದ್ದಾರೆ. ಹೀಗಾಗಿ ಬೆಳಿಗ್ಗೆ ಸ್ವಲ್ಪ ಸಮಸ್ಯೆ ಆಗಿತ್ತು. ತದನಂತರ ಸರಿಪಡಿಸಲಾಗಿ ಮತ ಎಣಿಕೆ ಮತ್ತೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಎರಡನೇ ಸುತ್ತಿನ ಮತ ಎಣಿಕೆಗೆ ಎಜೆಂಟ್‍ರಿಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಕಟ್ನೂರು, ಅಮರಗೋಳ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ವಿಷಯಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮರು ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಳಿಕ ಮಾತನಾಡಿದ ಪೆÇಲೀಸ್ ಆಯುಕ್ತ ಲಾಬೂರಾಮ್ ಮತ ಎಣಿಕೆ ಕಾರ್ಯಕ್ಕೆ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ನಿಯೋಜಿಸಲಾಗಿದೆ ಎಂದರು. ಹೊಸ ವರ್ಷಕ್ಕೆ ರಾಜ್ಯ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲು ಹೊಟೆಲ್ ಮಾಲೀಕರಿಗೆ ತಿಳಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧಾರವಾಡ ಜಿಲ್ಲೆಯ ಒಟ್ಟು 7 ತಾಲೂಕಿನ 136 ಗ್ರಾಮ ಪಂಚಾಯತಿಗಳಿಗೆ ದಿ. 22 ಹಾಗೂ 27 ರಂದು ಚುನಾವಣೆ ನಡೆದಿದ್ದು ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ.
ಈಗಾಗಲೇ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ 116 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯ 676 ಮತಕ್ಷೇತ್ರಗಳ 1952 ಸದಸ್ಯ ಸ್ಥಾನಗಳಿಗೆ ಒಟ್ಟು 5521 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರೆಲ್ಲರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಅಭ್ಯರ್ಥಿಗಳು:
ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಮಾಡದ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಘಟನೆ ಇಲ್ಲಿನ ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆ ಮತ ಎಣಿಕೆ ಕೇಂದ್ರದಲ್ಲಿ ನಡೆಯಿತು. ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಲ್ಲ. ಎಲ್ಲಾ ಅಭ್ಯರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ಒಂದೇ ಕೊಠಡಿಯಲ್ಲಿ 500 ಜನರನ್ನು ಕೂಡಿ ಹಾಕಿದ್ದಾರೆ ಎಂದು ಶಿರಗುಪ್ಪಿ ಹಳ್ಯಾಳ ಗ್ರಾಮ ಪಂಚಾಯತನ ಆಭ್ಯರ್ಥಿಗಳು ಎಣಿಕೆ ಕೇಂದ್ರದಿಂದ ಹೊರ ನಡೆದರು. ಸಕ್ಕರೆ ಕಾಯಿಲೆ ರೋಗಿಗಳಿದ್ದು, ಉಪಹಾರದ ವ್ಯವಸ್ಥೆ ಮಾಡಿಲ್ಲ ಎಂದು ಸಹ ಅಸಮಧಾನ ವ್ಯಕ್ತಪಡಿಸಿದರು. ಗುಂಪಾಗಿ ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಅವರನ್ನು ಸಮಧಾನಪಡಿಸಲು ಯತ್ನಿಸಿದರು. ಕೂಡಲೇ ಅಭ್ಯರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಅಭ್ಯರ್ಥಿಗಳಿಗೆ ಬೇರೆಡೆ ವ್ಯವಸ್ಥೆ ಮಾಡಿದ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡು ಮತ್ತೆ ಮತ ಎಣಿಕೆ ಕಾರ್ಯ ಸುವ್ಯವಸ್ಥಿತವಾಗಿ ಮುಂದುವರೆಯಿತು.