
ಹುಬ್ಬಳ್ಳಿ,ಮೇ13: ಧಾರವಾಡ ಜಿಲ್ಲೆಯ ಒಟ್ಟು ಏಳು ವಿಧಾನ ಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕಾಂಗ್ರೆಸ್ ಪಾಲಾಗಿದ್ದು ಮೂರರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗುತ್ತಿದ್ದಂತೆ ದೇಶದ ಚಿತ್ತ ಈ ಕ್ಷೇತ್ರದತ್ತ ನೆಟ್ಟಿತ್ತು. ಆದರೇ ಇಂದಿನ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ವಿರುದ್ಧ ಸೋತಿದ್ದು ಮಹೇಶ ಗೆಲುವಿನ ನಗೆ ಬೀರಿದ್ದಾರೆ.
ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಅವರು ಭಾರೀ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೆ ಶಾಸಕರಾಗಿ ಆಯ್ಕೆಯಾದರೆ, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಜಿದ್ದಾಜಿದ್ದಿಗೆ ಬಿದ್ದಿದ್ದ ಕಾಂಗ್ರೆಸ್‍ನ ಸಂತೋಷ ಲಾಡ್-ಬಿಜೆಪಿಯ ನಾಗರಾಜ ಛಬ್ಬಿ ನಡುವಿನ ಪೈಪೆÇೀಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಜಯಭೇರಿ ಬಾರಿಸಿದ್ದು ಛಬ್ಬಿ ಸೋಲನ್ನಪ್ಪಿದ್ದಾರೆ.
ಹು-ಧಾ ಪೂರ್ವ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಅವರು ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಘಟಾನುಟಿಗಳು ತಮ್ಮ ಹಿಂದೆ ಇದ್ದರೂ ಸೋಲಿಗೆ ಮಂಡಿಯೂರಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಧಾರವಾಡ ಕ್ಷೇತ್ರಕ್ಕೆ ಎಂಟ್ರಿ ನೀಡದೇ ದಾಖಲೆ ಗೆಲುವು ದಾಖಲಿಸಿದರೆ, ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಪರಾಭವಗೊಂಡಿದ್ದಾರೆ.
ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ತಮ್ಮದೇ ಪಾರುಪತ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಆರ್.ಪಾಟೀಲ್ ಅವರು ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಎಸ್. ಐ.ಚಿಕ್ಕನಗೌಡ್ರ ಸೋಲು ಅನುಭವಿಸಿದ್ದಾರೆ.