ಧಾರವಾಡ ಜಿಲ್ಲೆ: ರಕ್ಕಸ ಮಳೆಗೆ ತತ್ತರಿಸಿದ ಜನತೆ

ಹುಬ್ಬಳ್ಳಿ, ಸೆ 6: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಸುಮಾರು 4 ಗಂಟೆಗಳ ಕಾಲ ನಿರಂತರ ಮಳೆ ಸುರಿದಿದ್ದು, ಬಹುತೇಕ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯ ನವಲಗುಂದ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಅಣ್ಣೆಗೇರಿ ಸೇರಿದಂತೆ ಮತ್ತಿತರೆಡೆ ಭಾರೀ ಮಳೆ ಸುರಿದು ಜಮೀನುಗಳು ಜಲಾವೃತವಾಗುವುದರೊಂದಿಗೆ ಬೆಳೆದ ಪೈರುಗಳು ನಾಶವಾಗಿವೆ.
ಬಹುತೇಕ ಕಡೆಗಳಲ್ಲಿ ಮನೆಗಳಿಗೂ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.
ವ್ಯಾಪಕ ಮಳೆಯಿಂದ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಬರುತ್ತಿದ್ದು, ಈ ಭಾಗದಲ್ಲಿ ಬಹಳಷ್ಟು ಹಳ್ಳಿಗಳಿಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ಬಹುತೇಕ ಹಳ್ಳ, ಸರುವುಗಳು ಭರ್ತಿಯಾಗಿ ಹರಿಯುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕಳೆದ ರಾತ್ರಿ ಸುರಿದ ಘಣ ಘೋರ ಮಳೆಗೆ ಬೆಣ್ಣೆ ಹಳ್ಳದ ದಡದ ಗ್ರಾಮಗಳಿಗೆ ಅಕ್ಷರಶ: ಜಲಗಂಡಾಂತರ ಎದುರಾಗಿತ್ತು. ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ಸೇತುವೊಂದು ಕುಸಿದು ಹೋಗಿ ಕೂದಲೆಳೆ ಅಂತರದಲ್ಲಿ ಹಳ್ಳ ವೀಕ್ಷಿಸಲು ತೆರಳಿದ್ದವರು ಪಾರಾದರೆ ಹುಬ್ಬಳ್ಳಿ ತಾಲೂಕಿನ ಹಳಿಯ್ಯಾಳ ಕಡಪಟ್ಟಿ ಗ್ರಾಮದ ಬಳಿ ಬೆಣ್ಣಿಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ 6 ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟ್ ಸಹಾಯದಿಂದ ರಕ್ಷಿಸಿತು.
ನವಲಗುಂದ ತಾಲೂಕಿನ ಬೊಗಾನೂರು ಗ್ರಾಮದಲ್ಲಿ ದೊಡ್ಡ ಹಂದಿಗನಹಳ್ಳ ತುಂಬಿ ಹರಿದು ಸುಮಾರು 40 ಮನೆಗಳಿಗೆ ನೀರು ನುಗ್ಗಿದರೆ, ತಾಲೂಕಿನ ಖನ್ನೂರ ಗ್ರಾಮದ ಬಳಿ ಸೇತುವೆ ಮುಳುಗಡೆಯಾಗಿದೆ.
ಕುಂದಗೋಳ ತಾಲೂಕಿನ ಬೆನಕನಹಳ್ಳಿ ಹಿರೇನರ್ತಿ, ಚಿಕ್ಕನರ್ತಿ, ಇಂಗಳಹಳ್ಳಿ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ತಾಲೂಕಿನ ಚಿಕ್ಕನರ್ತಿ ಹಾಗೂ ಹಿರೇನರ್ತಿ ಮಧ್ಯದ ಗೂಗಿ ಹಳ್ಳ ಮತ್ತೆ ಅಬ್ಬರಿಸಿ ಹರಿಯುತ್ತಿರುವುದರಿಂದ ಸೇತುವೆ, ರಸ್ತೆಗಳು ಬಹುತೇಕ ಹಾಳಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಬಾಕ್ಸ್:
ಶಾಲಾ ಕಾಲೇಜುಗಳಿಗೆ ರಜೆ
ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳಗಳು ಉಕ್ಕಿ ಬರುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ರೈತರು, ಸಾರ್ವಜನಿಕರು ಹಳ್ಳ, ಕೊಳ್ಳಗಳನ್ನು ದಾಟುವ ಸಾಹಸಗಳಿಗೆ ಕೈ ಹಾಕಬಾರದು. ಜಾನುವಾರುಗಳ ಸುರಕ್ಷತೆಗೂ ಎಚ್ಚರವಹಿಸಬೇಕು ಎಂದು ತಿಳಿಸಿದ್ದಾರೆ.
ಬಾಕ್ಸ್
ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಶೇಂಗಾ ಹತ್ತಿ ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು ನಡು ನೀರಿನಲ್ಲಿ ನಿಂತಂತಾಗಿದೆ.

ಕ್ಯಾಪ್
ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಂದಗೋಳ ತಾಲೂಕಿನ ಹಿರೇನರ್ತಿ ಬಳಿ ತುಂಬಿ ಹರಿದ ಬೆಣ್ಣೆಹಳ್ಳದ ದೃಶ್ಯ.