ಧಾರವಾಡ ಜಿಲ್ಲೆ ನೈಸರ್ಗಿಕ, ಜೀವವೈವಿಧ್ಯತೆಯ ಸರಪಳಿ ಯಾಗಿದೆ

ಧಾರವಾಡ, ಜು.22: ಧಾರವಾಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ವಿವಿಧ ರೀತಿಯ ಸಂಪನ್ಮೂಲಗಳ ಸಂಪತ್ತು ಇದೆ. ಅದನ್ನು ಕಾಪಾಡಿಕೊಂಡು ಜಿಲ್ಲೆಯ ನೈಸರ್ಗಿಕ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಅಗತ್ಯವಿದೆ ಎಂದು ಇಕೋ ವಾಚ್ ಸಂಸ್ಥೆಯ ಮುಖ್ಯಸ್ಥರು ಆಗಿರುವ ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಅವರು ಹೇಳಿದರು.

ಅವರು ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸಿಡಾಕ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೇಲೂರ ರೋಟರಿ ಕ್ಲಬ್ ಸಂಯುಕ್ತವಾಗಿ ಆಯೋಜಿಸಿದ್ದ ಧಾರವಾಡದ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇಂದು ಅಭಿವೃದ್ಧಿ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಯಥೇಚ್ಛ ಬಳಕೆ ಮತ್ತು ಕೈಗಾರಿಗಳ ವಿಸ್ತರಣೆಯಾಗಿದೆ.

ಮುಂದಾಲೋಚನೆ, ಸಮರ್ಪಕವಾದ ಕ್ರೀಯಾಯೋಜನೆ ಇಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ಅಸಮತೋಲನಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಕುರಿತು ಧಾರವಾಡಿಗರು ಆತ್ಮಾವಲೋಕನ, ಚಿಂತನೆ ಮಾಡುವ ಅಗತ್ಯವಿದೆ.

ಧಾರವಾಡ ಜಿಲ್ಲೆ ಮತ್ತು ಸುತ್ತಲಿನ ಜಿಲ್ಲೆಗಳ ಗಡಿಪ್ರದೇಶಗಳು ಅಮೂಲ್ಯವಾದ ಮಣ್ಣು, ನೀರು, ಸಸ್ಯ, ಗಾಳಿ ಮತ್ತು ಅರಣ್ಯ ಸಂಪತ್ತು ಹೊಂದಿವೆ. ಇದನ್ನು ಉಳಿಸಿಕೊಂಡು ನಾವು ಮತ್ತು ನಮ್ಮ ಕೈಗಾರಿಕೆಗಳು ಬೆಳೆಯಬೇಕು. ಅದಕ್ಕಾಗಿ ಒಂದು ಅಭಿವೃದ್ಧಿಪರ ನಿರ್ಧಿಷ್ಟ ನೀಲನಕ್ಷೆ ಸಿದ್ದಪಡಿಸುವ ಅಗತ್ಯವಿದೆ ಎಂದು ಸುರೇಶ ಹೆಬ್ಳೀಕರ್ ಅಭಿಪ್ರಾಯಪಟ್ಟರು.

ಮಹಾನಗರಗಳನ್ನು ಬೆಳೆಸುವ ಕಡೆಗೆ ನಮ್ಮ ಆದ್ಯತೆ ಆಗುತ್ತಿದೆ. ಆದರೆ ಅದರಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಚಿಂತಿಸುತ್ತಿಲ್ಲ. ಬೆಂಗಳೂರು, ಮುಂಬೈದಂತ ಮಹಾನಗರಗಳ ಮಕ್ಕಳಿಗೆ ಇಂದು ಪಕ್ಷಿ, ಚಿಟ್ಟೆ, ತರತರದ ಸಸ್ಯ, ಮರ, ಮಣ್ಣು, ಇತ್ಯಾದಿಗಳನ್ನು ಯೂಟ್ಯೂಬ್, ಇಂಟರ್ನೆಟ್, ಸೋಶಿಯಲ್ ಮಿಡಿಯಾ ಮೂಲಕ ತೋರಿಸುವ ಪರಿಸ್ಥಿತಿ ಬಂದಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ನಮ್ಮ ಶ್ರೀಮಂತ, ಸಮೃದ್ಧವಾದ ಪರಿಸರ ಬಿಟ್ಟು ಹೋಗುವ ಬದ್ಧತೆ ತೋರಬೇಕು ಎಂದರು.

ಧಾರವಾಡ ಜಿಲ್ಲೆಯು ರಾಜ್ಯ ಮಾತ್ರವಲ್ಲ, ರಾಷ್ಟಮಟ್ಟದಲ್ಲಿ ತನ್ನದೆ ಆದ ಪ್ರಾಮುಖ್ಯತೆ, ಜನಪ್ರಿಯತೆ ಹೊಂದಿದೆ. ಇದಕ್ಕೆ ಇಲ್ಲಿನ ಸಾಹಿತ್ಯ, ಸಂಗೀತ, ಕಲೆ, ಕಾವ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳು ಕಾರಣವಾಗಿವೆ. ಇವುಗಳನ್ನು ಉಳಿಸಿ, ಬೆಳೆಸುವ ಮೂಲಕ ಧಾರವಾಡ ಅಭಿವೃದ್ಧಿ ಸಾಧಿಸಬೇಕು ಎಂದು ಸುರೇಶ ಹೆಬ್ಳೀಕರ್ ಹೇಳಿದರು.

ಇಕೋ ವಾಚ್ ಸಂಸ್ಥೆಯು ಧಾರವಾಡದ ವೈವಿಧ್ಯಮಯ ಪರಿಸರವನ್ನು ಉಳಿಸಲು ಮತ್ತು ಕೈಗಾರಿಕೆಗಳು ಸೇರಿದಂತೆ ಎಲ್ಲ ಅಭಿವೃದ್ಧಿಪರ ಕಾರ್ಯ ಚಟುವಟಿಕೆಗಳಿಗೆ ಉತ್ತಮ ಪರಿಸರ ಕಾಪಾಡಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಪೆÇ್ರ.ಗೋಪಾಲ ಕೆ.ಕಡೆಕೊಡಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ಉಪ ನಿರ್ದೇಶಕ ಡಾ.ಭೀಮಪ್ಪ ಎಂ.ಎನ್., ಪರಿಸರ ಅಧಿಕಾರಿ ಶೋಭಾ ಪೆÇೀಳ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಚಂದ್ರಪ್ಪ, ಇಕೋ ವಾಚ್ ಸಂಸ್ಥೆಯ ನಿರ್ದೇಶಕ ಅಕ್ಷಯ ಹೆಬ್ಳೀಕರ್ , ಕ್ಲಬ್ ಸದಸ್ಯ ಅರುಣ ಹೆಬ್ಳೀಕರ್, ಡಾ.ಅರವಿಂದ ಕುಲರ್ಣಿ, ಪ್ರಕಾಶಚಂದ್ರ ಸೇರಿದಂತೆ ಬೇಲೂರು ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕೆಗಳ ಮುಖ್ಯಸ್ಥರು, ಅಧಿಕಾರಿಗಳು, ಪರಿಸರ ಪ್ರೇಮಿಗಳು ಮತ್ತು ಬೇಲೂರು ರೋಟರಿ ಕ್ಲಬ್ ಸದಸ್ಯರು ಭಾಗವಹಿಸಿದ್ದರು.