ಧಾರವಾಡ ಕಲಾವಿದರನ್ನು ಪೋಷಿಸುತ್ತ ಬಂದ ನಗರ

ಧಾರವಾಡ,ಜೂ2: ಕಲಾವಿದರನ್ನು ಪೋಷಿಸುತ್ತ ಬಂದ ನಗರ. ತಮ್ಮ ಸಾಹಸದ ಕಲೆಯ ಮೂಲಕ ಜೀವನ ಸಾಗಿಸುತ್ತಿರುವಂಥ ಗುರು ರಾಘವೇಂದ್ರಸ್ವಾಮಿ ಸೈಕಲ್ ಸರ್ಕಸ್ ಕಲಾ ಮಂಡಳಿಯ ಕಲಾವಿದರ ಕಲೆಯನ್ನು ಮತ್ತು ಅವರ ಸಾಹಸವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಲಾಭವನದ ಕಡಪಾ ಮೈದಾನದಲ್ಲಿ 6 ದಿನಗಳ ಕಾಲ ಜರುಗುವ ಸೈಕಲ್ ಸಾಹಸದ ಸರ್ಕಸ್ಸಿಗೆ ಚಾಲನೆ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ಈ ಕಲಾವಿದರು ರಾಜ್ಯದಾದ್ಯಂತ ಸುತ್ತುತ್ತಾ, ಯುವಕರಲ್ಲಿ ಸಾಹಸದ ಕಲೆ ಕುರಿತಂತೆ ಆಸಕ್ತಿ ಹುಟ್ಟಿಸುವಂತೆ ಮಾಡುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಅತಿಥಿಯಾಗಿ ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಹಡಗಲಿ ಮಾತನಾಡಿ, ಇಂದು ಮೊಬೈಲ್ ಮತ್ತು ಟಿವಿಗಳಲ್ಲಿ ಸಾಹಸದ ಕ್ರೀಡೆಗಳನ್ನು ಖುಷಿ ಪಡುತ್ತೇವೆ. ಆದರೆ ಇಂದು ನಮ್ಮ ಕಣ್ಣೆದುರಿಗೆನೇ ಸಾಹಸದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು ಕಡಿಮೆಯಾಗುತ್ತಿದೆ.ಆದರೆ ಧಾರವಾಡದ ಜನತೆ ಇಂತಹ ಕಲಾವಿದರಿಗೆ ಮುಕ್ತವಾಗಿ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಹೆಮ್ಮೆ ಪಡುವಂಥದ್ದು ಎಂದರು.

ಸಂಘದ ಗೌರವ ವ್ಯವಸ್ಥಾಪಕ ಶಿ.ಮ. ರಾಚಯ್ಯನವರ ಉಪಸ್ಥಿತರಿದ್ದರು.