ಧಾರವಾಡದಲ್ಲೂ ಲೋಕಾದಾಳಿ

ಧಾರವಾಡ, ಆ 17: ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿರುವ ಸಂತೋಷ ಆನಿಶೆಟ್ಟರ್ ಅವರ ಧಾರವಾಡದಲ್ಲಿರುವ ಮನೆ ಮೇಲೆ ಇಂದು ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿನಡೆಸಿದ್ದಾರೆ.

ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿನ ಮಿಚಿಗನ್ ಲೇಜೌಟ್‍ನಲ್ಲಿರುವ ಸಂತೋಷ್ ಮನೆಯ ಮೇಲೆ ಇಂದು ಮುಂಜಾನೆ ಹಿರಿಯ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಕಾಲಕ್ಕೆ ಬ್ರಿಟೀಷ ಕಾಲದ ವಸ್ತುಗಳು, ನೂರಾರು ವರ್ಷ ಹಳೆಯದಾದ ತಾಮ್ರದ ಬೀಗಗಳು, ಇನ್ನಿತರ ಬೆಲೆಬಾಳುವ ವಸ್ತುಗಳು ದೊರೆತಿವೆ ಎನ್ನಲಾಗಿದೆ.

ಮನೆ ಒಳಗಿನ ಅಲಂಕಾರಕ್ಕಾಗಿ ಅಮೂಲ್ಯವಾದ ಕಟ್ಟಿಗೆಯನ್ನು ಬಳಸಲಾಗಿದೆ ಎನ್ನಲಾಗಿದ್ದು, ಅಧಿಕಾರಿಗಳು ಪರಿಶೀಲಿಸಿದರು.

ಇದರೊಡನೆ ಏಕಕಾಲಕ್ಕೆ ದೊಡ್ಡನಾಯಕನಕೊಪ್ಪದಲ್ಲಿನ ಸಂತೋಷ ಸಹೋದರ ಆನಂದ ಅವರ ಮನೆ ಮೇಲೂ ದಾಳಿ ನಡೆಯಿತು.

ದಾಳಿ ಕಾಲಕ್ಕೆ ದೊರೆತಿರುವ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು ಪರಿಶೀಲನೆ ಮದ್ಯಾಹ್ನವೂ ಮುಂದುವರೆದಿತ್ತು.

ಕೆಲ ವರ್ಷಗಳ ಹಿಂದೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದರೂ ಸಂತೋಷ ಧಾರವಾಡದಲ್ಲಿ ಮನೆ ಹೊಂದಿದ್ದಾರೆ.