ಧಾರವಾಡದಲ್ಲಿ ಪ್ರಶಿಕ್ಷಣ ವಿಶ್ವವಿದ್ಯಾಲಯ ಆರಂಭಕ್ಕೆ ಆಗ್ರಹ

ಧಾರವಾಡ,ಜು17 : ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಪದವಿ ಶಿಕ್ಷಣ(ಬಿ.ಇಡಿ.), ಸ್ನಾತಕೋತ್ತರ ಶಿಕ್ಷಣ(ಎಂ.ಇಡಿ.), ಶಿಕ್ಷಣದ ಡಿಪ್ಲೋಮಾ ಕೋರ್ಸಗಳನ್ನು ನಡೆಸುವ ಎಲ್ಲ ಕಾಲೇಜುಗಳನ್ನು ಒಂದೇ ನಿಯಂತ್ರಣ ಕಕ್ಷೆಗೆ ಒಳಪಡಿಸಿ ಶಿಕ್ಷಕರ ತರಬೇತಿಯನ್ನು ಕ್ರಿಯಾಪ್ರೇರಕಗೊಳಿಸುವಲ್ಲಿ ಅಗತ್ಯವಾಗಿರುವ ಪ್ರಶಿಕ್ಷಣ ವಿಶ್ವವಿದ್ಯಾಲಯ (ಯುನಿರ್ವಸಿಟಿ ಆಫ್ ಟೀಚರ್ ಎಜ್ಯೂಕೇಷನ್)ವನ್ನು ಧಾರವಾಡ ಡಯಟ್ ಆವರಣದಲ್ಲಿ ಆರಂಭಿಸುವಂತೆ ಆಗ್ರಹಿಸಲಾಗಿದೆ.

ನಗರದ ಡಯಟ್ ಆವರಣದಲ್ಲಿ ಜರುಗಿದ ಗಂಡು ಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದ್ದು, ಈ ಸಮಾವೇಶದಲ್ಲಿ ಕನ್ನಡ ಪತ್ರಿಕೋದ್ಯಮದ ಹಿರಿಯ ಪಾರಂಪರಿಕ ನಿಯತಕಾಲಿಕೆ ಮತ್ತು ಕನ್ನಡ ಪ್ರಾಥಮಿಕ ಶಿಕ್ಷಣ ಸಂವರ್ಧನೆಗೆ ಅಹರ್ನಿಶಿ ಶ್ರಮಿಸಿರುವ ಸಂಪೂರ್ಣ ಸರಕಾರಿ ಒಡೆತನದ ಮತ್ತು ಶಾಲಾ ಶಿಕ್ಷಣ ಇಲಾಖೆಯದ್ದೇ ಆಗಿರುವ `ಜೀವನ ಶಿಕ್ಷಣ’ ಶೈಕ್ಷಣಿಕ ಮಾಸಪತ್ರಿಕೆಯ ಪ್ರಕಟಣಾ ವೆಚ್ಚವನ್ನು ಭರಿಸಲು ರಾಜ್ಯ ಸರಕಾರ ಪ್ರತೀ ಆರ್ಥಿಕ ವರ್ಷದಲ್ಲಿ ತನ್ನ ಬಜೆಟ್ ಮೂಲಕ ವಾರ್ಷಿಕ ಸುಮಾರು 50 ಲಕ್ಷ ರೂ.ಗಳಷ್ಟಯ ಮೊತ್ತವನ್ನು ಒದಗಿಸಬೇಕು.

ಧಾರವಾಡದಲ್ಲಿ 1856 ರಲ್ಲಿಯೇ ಆರಂಭಗೊಂಡಿರುವ ಪ್ರತಿಷ್ಠಿತ ಗಂಡು ಮಕ್ಕಳ ಸರಕಾರಿ ಟ್ರೇನಿಂಗ್ ಕಾಲೇಜು ಅಂದರೆ ಈಗಿನ ಡಯಟ್‍ನ ಒಟ್ಟು ಆವರಣದಲ್ಲಿರುವ ಎಲ್ಲಾ ಕಟ್ಟಡಗಳಿಗೆ ನೂರು ವರುಷಗಳು ಪೂರೈಸಿರುವುದರಿಂದ ರಾಜ್ಯ ಸರಕಾರ ಇದನ್ನು `ಪಾರಂಪರಿಕ ಆವರಣ’ ಎಂದು ಪರಿಗಣಿಸಿ ಅದರ ಸಂಪೂರ್ಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂಬುದು ಸೇರಿ 9 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಂ.ಎಸ್.ಪಾಟೀಲ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಬಿ.ಬಿ.ಕೊಟಬಾಗಿ, ಬಸವರಾಜ ಕುರಬೇಟ, ಎ. ಡಿ. ಕಾಶಿನಕುಂಟಿ, ಪಿ.ಎಂ. ಕಂಬಳಿ, ಟಿ.ಟಿ. ದಾಸರ, ವಸಂತ ಪತ್ತಾರ, ಎಸ್.ಎಸ್. ಭಲಾರಿ, ಆನಂದ ಕುಲಕರ್ಣಿ, ಬಸವರಾಜ ಪರಡ್ಡಿ ಮಾತನಾಡಿದರು. ಟ್ರೇನಿಂಗ್ ಕಾಲೇಜಿನ ಹಿಂದಿನ ಪ್ರಶಿಕ್ಷಕರುಗಳಾದ ಪಿ.ಎನ್. ಜೋಶಿ, ಆರ್.ಜಿ. ಹಿರೇಮಠ, ಬಿ. ಟಿ. ಹಾಲಪ್ಪ, ಎಸ್. ವ್ಹಿ. ಬೆಣ್ಣಿ, ನಿವೃತ್ತ ಅಧ್ಯಾಪಕರುಗಳಾದ ಅಶೋಕ ಚವ್ಹಾಣ, ಎ.ಎ. ಕರಿಯಪ್ಪನವರ, ಎಸ್.ಡಿ. ಪವಾರ, ಜಿ.ಎನ್. ಹೊಸಮನಿ, ಹೇ.ಜ. ಕಡೇಮನಿ, ಜಿ.ಕೆ.ಜುಜಾರೆ ಇತರರು ಇದ್ದರು.
ಡಯಟ್ ಪ್ರಾಚಾರ್ಯ ಜೆ.ಜಿ.ಸೈಯ್ಯದ್ ಅಧ್ಯಕ್ಷತೆವಹಿಸಿದ್ದರು. ಮಾಲತೇಶ ಕರ್ಜಗಿ ಸ್ವಾಗತಿಸಿದರು. ಆರ್.ಬಿ.ಮಡಿವಾಳರ ವಂದಿಸಿದರು. ಹೇಮಂತ ಲಮಾಣಿ, ಶಂಖರ ಕಬಾಡಿ, ಅನಿಲ ಮೇತ್ರಿ ಹಾಗೂ ಎ.ಟಿ. ಚವ್ಹಾಣ ವಚನ ಗಾಯನ ಗೋಷ್ಠಿ ನಡೆಸಿಕೊಟ್ಟರು.