ಧರ್ಮ-ಹಿಂದುತ್ವ ಬಿಟ್ಟು ತಾಕತ್ತಿದ್ದರೆ ರೈತ, ನಿರುದ್ಯೋಗ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆ ನಡೆಸಿ-ಬಿಜೆಪಿಗೆ ಪ್ರಿಯಾಂಕ ಗಾಂಧಿ ಸವಾಲು

ಮಂಡ್ಯ: ಪಾಕಿಸ್ತಾನ, ಧರ್ಮ, ಹಿಂದುತ್ವದ ಆಧಾರದ ಮೇಲೆ ಚುನಾವಣೆ ನಡೆಸುವುದನ್ನು ಬಿಟ್ಟು ನಿಮಗೆ ತಾಕತ್ತಿದ್ದರೆ ನಿರುದ್ಯೋಗ, ರೈತರ ಆತ್ಮಹತ್ಯೆ ಮುಂದಿಟ್ಟುಕೊಂಡು ಚುನಾವಣೆ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಎಐಸಿಸಿ ಪ್ರಧಾನ ಕಾರ‌್ಯದರ್ಶಿ ಪ್ರಿಯಾಂಕ ಗಾಂಧಿ ಬಹಿರಂಗ ಸವಾಲು ಹಾಕಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯನ್ನು ಉದ್ಘಾಟಿಸಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ನಿಮ್ಮ ಸಮಸ್ಯೆಯನ್ನು ಕೇಳದೆ ಕೇವಲ ಭಾಷಣ ಮಾಡಿ ಹೋಗುತ್ತಿದ್ದಾರೆ. ಉದ್ಯೋಗವಿಲ್ಲದೆ ಯುವಕರು, ಬೆಲೆ ಏರಿಕೆಯಿಂದ ರೈತರು, ಮಹಿಳೆಯರು ತತ್ತರಿಸಿ ಹೋಗಿದ್ದಾರೆ. ಬೆಂಬಲ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಚಕಾರ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅವರು ಏನೇ ಮಾಡಲಿ, ಪ್ರಸ್ತುತ ಬದಲಾವಣೆ ಗಾಳಿ ಬೀಸುತ್ತಿದ್ದು, ನೀವೇ ಬದಲಾವಣೆ ತರಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ನಿಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.
ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ ಹಾಕಿ :
ನೀವು ನಿಮ್ಮ ಮಕ್ಕಳ ಬದುಕು, ಭವಿಷ್ಯ, ಆರೋಗ್ಯ ಎಲ್ಲದರ ಮೇಲೂ ಗಮನವಿಟ್ಟು ಮತ ಹಾಕಬೇಕು. ನಿಮ್ಮ ಕಷ್ಟಕ್ಕೆ ಗೌರವ ಸಿಗಬೇಕು. ಅವರು ಸ್ವಾರ್ಥಕ್ಕೋಸ್ಕರ ನಮ್ಮಲ್ಲಿ ಜಗಳ ಹತ್ತಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಚುನಾವಣೆಯಲ್ಲಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಯಾವುದನ್ನು ಈಡೇರಿಸಲ್ಲ. ಹಿಂದೆ ಬಿಜೆಪಿ ಕೊಟ್ಟಿದ್ದ 25 ಭರವಸೆಗಳಲ್ಲಿ 24ನ್ನು ಈಡೇರಿಸಿಲ್ಲ. ಲಕ್ಷಾಂತರ ಕೆಲಸಗಳು ಖಾಲಿ ಇವೆ. ಆದರೆ ನಿಮಗೆ ಕೊಡಲು ಈ ಸರ್ಕಾರ ತಯಾರಿಲ್ಲ. ಹಾಗಾಗಿ ಜನರು ಮಾತಿಗೆ ಮರುಳಾಗಿ ಮತ ಹಾಕಬೇಡಿ, ಆತ್ಮಸಾಕ್ಷಿಗೆ ಮೇಲೆ ನಂಬಿಕೆಯಿಟ್ಟು ಮತ ಹಾಕಿ ಎಂದು ಮನವಿ ಮಾಡಿದರು.