ಧರ್ಮ ಸಮನ್ವಯತೆಯೆ ಈ ನೆಲದ ಅಂತಃಶಕ್ತಿ:ಡಾ. ಮನು ಬಳಿಗಾರ್

ಬೀದರ:ಜ.6:ಸಾಮಾಜಿಕ ಸಾಮರಸ್ಯ, ಧರ್ಮ ಸಮನ್ವಯತೆಯೆ ಈ ನೆಲದ ಅಂತಃಶಕ್ತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ನುಡಿದರು. ಅವರು ನಗರದ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಹಾಗೂ ಕಸ್ತೂರಿ ಪಟಪಳ್ಳಿ ಬರೆದ ಶಿಕ್ಷಣ ಪ್ರೇಮಿ ಡಾ. ಅಬ್ದುಲ್ ಖದೀರ್ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಒಂದು ಜಾತಿಯಲ್ಲಿ ಹುಟ್ಟು ಆಕಸ್ಮಿಕ ಆದರೆ ಜ್ಯಾತ್ಯತೀತವಾಗಿ ಬದುಕು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸರ್ವಸಮತೆಯ ತತ್ವವನ್ನು ಸಾರಿದ ಬಸಣ್ಣ ಸಮಾಜದ ಕಟ್ಟಕಡೆಯ ಮನುಷ್ಯರಲ್ಲಿಯೂ ಆತ್ಮಸ್ಥೈರ್ಯವನ್ನು ಮಾನವ ಘನತೆಯನ್ನು ಎತ್ತಿ ಹಿಡಿದು, ವಚನ ಸಾಹಿತ್ಯ ರಚಿಸಿದ್ದು, ದಾಸರ ಕೀರ್ತನೆ, ತತ್ವಪದಗಳು, ಜನಪದ ಸಾಹಿತ್ಯ ಇವೆಲ್ಲ ಇಲ್ಲಿ ರೂಪತಾಳಿದ ಕಾರಣ ಇಲ್ಲಿ ಜಾತ್ಯತೀತ ಭಾವ ನೆಲೆಗೊಳ್ಳಲು ಸಾಧ್ಯವಾಗಿದೆ. ಶರಣರು ಕನ್ನಡಕ್ಕೆ ಮೊದಲ ಆದ್ಯತೆ ನೀಡಿದರು. ಮುಂದುವರೆದಂತೆ ಭಾರತರತ್ನ ಡಾ. ಸಿ.ಎನ್.ಆರ್ ರಾವ, ಸುಧಾಮೂರ್ತಿ ಮೊದಲಾದವರೆಲ್ಲ ಕನ್ನಡ ಮಾಧ್ಯಮಲ್ಲೆ ಓದಿ ಬೆಳೆದವರು. ಆದ್ದರಿಂದ ಕನ್ನಡದ ಬಗ್ಗೆ ತಾತ್ಸಾರ ಸಲ್ಲದು ಬಹುಮುಖ್ಯವಾಗಿ ಯುವಕರು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕಾದರೆ ಏಕಾಗ್ರತೆ, ಸತತ ಪ್ರಯತ್ನ, ನಿರಂತರ ಶ್ರಮ ಜೀವಿಗಳಾಗಬೇಕು. ಯುವಕರು ದುಶ್ಚಗಳಿಂದ ದೂರವಿರಬೇಕು ಎಂದು ಕರೆನೀಡಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತ ನೂರು ಸಮಸ್ಯಗಳಿಗೆ ಒಂದೆ ಪರಿಹಾರವೆಂದರೆ ಅದು ಶಿಕ್ಷಣ ಅದನ್ನು ಪೂರೈಸುವ ಕಾರ್ಯವನ್ನು ಅಬ್ದುಲ್ ಖದೀರವರು ನೆರವೇರಿಸುತ್ತಿದ್ದು ಅವರ ಜೀವನ ಸಾಧನೆ ಕುರಿತು ಕಸ್ತೂರಿ ಪಟಪಳ್ಳಿಯವರು ಅತ್ಯಂತ ಅರ್ಥಪೂರ್ಣವಾಗಿ ಬರೆದಿದ್ದಾರೆ. ಇದೊಂದು ಸಾಂಸ್ಕøತಿಕ ದಾಖಲೆಯಾಗಿದ್ದು ಇಂಥ ಹೊಸ ಆಲೋಚನೆ ಮಾಡಿ ಕಾರ್ಯರೂಪಕ್ಕೆ ತಂದ ಸುರೇಶ ಚನಶೆಟ್ಟಿ ಅಭಿನಂದನಾರ್ಹರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಹೀನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಅವರು ಮಾತನಾಡುತ್ತ ಪ್ರೀತಿ ವಿಶ್ವಾಸದಿಂದ ದೇಶದಲ್ಲಿ ಶಾಂತಿ ನೆಮ್ಮದಿ ತರಲು ಸಾಧ್ಯ. ವಿದ್ಯಾರ್ಥಿಗಳು ಕೇವಲ ಡಾಕ್ಟರ್ , ಎಂಜಿನಿಯರ್ ಆಗುವುದು ಮಹತ್ವವಿಲ್ಲ. ಅವರಲ್ಲಿ ಮಾನವೀಯ ಮೌಲ್ಯ ಬೆಳೆಸುವುದು ಮುಖ್ಯವಾಗಿದೆ. ಭಾಷೆಯ ಹೆಸರಲ್ಲಿ ತಾರತಮ್ಯವಾಗಲಿ ರಾಜಕೀಯವಾಗಲಿ ಮಾಡಬಾರದು. ಆಯಾ ಪ್ರದೇಶದ ಮಾತೃಭಾಷೆಯ ಕಲಿಕೆ ಎಲ್ಲರ ಹಕ್ಕಾಗಬೇಕು ಅದನ್ನು ಉಲ್ಲಂಘಿಸುವುದೆಂದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ. ಆ ಕಾರಣಕ್ಕಾಗಿಯೇ ನಾವು ಕಳೆದ ಎರಡು ದಶಕಗಳಿಂದ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಭರದಿಂದ ಮಾಡುತ್ತಿದ್ದೇವೆ. ಅದಕ್ಕೆ ಪರಿಷತ್ತು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ವಿಧಾಯಕ ಕಾರ್ಯ ಮಾಡುತ್ತ ಬಂದಿದ್ದು ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದು ಅಕ್ಷರಪ್ರೀತಿಯನ್ನು ಮೆರೆದಿದೆ. ಈ ನೆಲದಲ್ಲಿ ಕನ್ನಡವನ್ನು ತಳಮಟ್ಟದ ಕಟ್ಟಬೇಕು ಅದಕ್ಕೆ ಎಲ್ಲರ ನೆರವು ಅಗತ್ಯವೆಂದು ನುಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆಯವರು ಮಾತನಾಡುತ್ತ ಕನ್ನಡ, ಕನ್ನಡಿಗ ಕರ್ನಾಟಕದ ವಿಕಾಸಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರು.
ಸಾಹಿತಿ ಕಸ್ತೂರಿ ಪಟಪಳ್ಳಿಯವರು ಮಾತನಾಡಿ ಬೀದರನಲ್ಲಿ ಉತ್ತಮವಾದ ಸಾಹಿತ್ಯ ಹಾಗೂ ಸಾಂಸ್ಕøತಿಕ ವಾತಾವರಣವಿದೆ. ಉದಯೋನ್ಮುಖ ಬರಹಗಾರರಿಗೆ ಕನ್ನಡ ಸಾಹಿತ್ಯ ಪರಿಷತ್ತು ಸೂಕ್ತ ವೇದಿಕೆ ಕಲ್ಪಿಸಿದ ಕಾರಣ ನಮ್ಮಂಥವರು ಸಾಹಿತ್ಯ ರಚಿಸಲು ಸಾಧ್ಯವಾಗಿದೆ ಎಂದು ನುಡಿದರು.
ಇದೆ ಸಂದರ್ಭದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ನೀಟ್‍ನಲ್ಲಿ 300ಕ್ಕಿಂತ ಹೆಚ್ಚು ಅಂಕ ಗಳಿಸಿ ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿ ಉಚಿತ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುಲಿಂಗ ತೂಗಾವೆ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ. ಎಸ್. ಮನೋಹರ ಬೀದರ, ಸಚ್ಚಿದಾನಂದ ಮಠಪತಿ ಹುಮನಾಬಾದ, ಸಾಹಿತಿ ಎಂ.ಜಿ. ಗಂಗನಪಳ್ಳಿ, ಭಾರತಿ ವಸ್ತ್ರದ, ಪ್ರೊ. ಜಗನ್ನಾಥ ಕಮಲಾಪುರೆ, ಪಾರ್ವತಿ ಸೊನಾರೆ ಚಂದ್ರಕಲಾ ಡಿಗ್ಗೆ, ಮೊದಲಾದವರು ಭಾಗವಹಿಸಿದರು. ನವರಸ ಕಲಾಲೋಕದ ವೈಜನಾಥ ಸಜ್ಜನಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಮೇನಕಾ ಪಾಟೀಲ ಸ್ವಾಗತಿಸಿದರೆ, ಡಾ. ಬಸವರಾಜ ಬಲ್ಲೂರ ನಿರೂಪಿಸಿದರು. ಶಿವಶಂಕರ ಟೋಕರೆ ವಂದಿಸಿದರು.