ಧರ್ಮ ಮಾರ್ಗದಿಂದ ಮುಕ್ತಿ ಹೊಂದಿ

ಗದಗ, ನ. 24 : ಧ್ಯಾನ, ದೇವರ ಸ್ಮರಣೆಯೊಂದಿಗೆ ಎಲ್ಲರೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವ, ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನದಲ್ಲಿ ಸಂತೃಪ್ತಿ ಹೊಂದಿ ಮುಕ್ತಿ ಪಡೆಯಬೇಕೆಂದು ಫಂಡರಪೂರದ ಪೂಜ್ಯ ಪ್ರಭಾಕರ (ದಾದಾ) ಬೋಧಲೆ ಮಹಾರಾಜರು ಹೇಳಿದರು.
ಅವರು ಬುಧವಾರ ನಗರದ ವಿಠ್ಠಲ ಮಂದಿರದಲ್ಲಿ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ 726ನೇ ಸಂಜೀವಿನಿ ಸಮಾಧಿ ದಿಂಡಿ ಸೋಹಳಾ ಉತ್ಸವದಲ್ಲಿ ಕಾಲಾಕೀರ್ತನೆ ನಡೆಸಿ ಸೇರಿದ ಭಕ್ತ ಸಮೂಹಕ್ಕೆ ಸಂದೇಶ ನೀಡಿದರು.
ಸಂತ ಪರಂಪರೆಯಲ್ಲಿ ಜ್ಞಾನೇಶ್ವರ ಮಹಾರಾಜರು ಶ್ರೇಷ್ಠ ಮತ್ತು ಪೂಜ್ಯನೀಯ ಸಂತರಾದವರು ವಿಶ್ವ ಕಲ್ಯಾಣಕ್ಕಾಗಿ ಅವರು ನೀಡಿದ ಸಂದೇಶ, ಅಮೃತವಾಣಿಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಮನುಕುಲದ ಉದ್ಧಾರಕ್ಕಾಗಿ ಭಗವಂತ ಸಂತ ಜ್ಞಾನೇಶ್ವರ, ತುಕಾರಾಮ, ನಾಮದೇವ ಹಾಗೂ ಏಕನಾಥ ಮಹಾರಾಜರ ಅಭಂಗ ಭಜನೆ, ಪ್ರವಚನ ಕೀರ್ತನೆಗಳ ಮೂಲಕ ಆಧ್ಯಾತ್ಮಿಕ ಲೋಕವನ್ನು ಶ್ರೀಮಂತಗೊಳಿಸಿ ಭಕ್ತರನ್ನು ಉದ್ಧರಿಸಿದ ಪೂಜ್ಯರಾಗಿದ್ದಾರೆ ಎಂದು ಬಣ್ಣಿಸಿದರು.
ಬೆಳಿಗ್ಗೆ ಕಾಕಡಾರತಿ, ಮಧ್ಯಾನ್ಹ ಆರತಿ ಕಾಲಾ, ಮಹಾಪ್ರಸಾದ ಜರುಗಿತು. ಸಂಜೆ ದಿಂಡಿಯು ನಗರ ಪ್ರದಕ್ಷಿಣೆ, ಆರತಿ ಹಾಗೂ ಮಹಾಪ್ರಸಾದ ಜರುಗಿತು.
ಗದಗ ಭಾವಸಾರ ಕ್ಷತ್ರೀಯ ಸಮಾಜ ಉತ್ಸವ ಸಮಿತಿಯ ಅಧ್ಯಕ್ಷ ಪರಶುರಾಮ ಮಹೇಂದ್ರಕರ, ಉಪಾಧ್ಯಕ್ಷ ತುಕಾರಾಮ ಬೇಂದ್ರೆ, ಮಂಜುನಾಥ ಕರ್ಣೆ, ಸಂತೋಷ ದಾಮೋದರ, ಕಾರ್ಯಾಧ್ಯಕ್ಷ ಧರ್ಮರಾಜ ಕರ್ಣೆ, ಗೌರವ ಕಾರ್ಯದರ್ಶಿ ವೆಂಕಟೇಶ ಕರ್ಣೆ, ಸಹಕಾರ್ಯದರ್ಶಿ ನಾಗರಾಜ ಸುಲಾಖೆ, ಖಜಾಂಚಿ ಸುರೇಶ ಮಹೇಂದ್ರಕರ, ಸಹಖಜಾಂಚಿ ರಾಹುಲ ಮಹೇಂದ್ರಕರ, ಸಂಘಟನಾ ಕಾರ್ಯದರ್ಶಿ ಪ್ರಮೋದ ಮಾಂಡ್ರೆ ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರು, ಟ್ರಸ್ಟ ಕಮೀಟಿಯ ಪದಾಧಿಕಾರಿಗಳು, ಭಾವಸಾರ ಕ್ಷತ್ರೀಯ ಯುವಕ ಮಂಡಳ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.