ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ಲಿಂಗಸುಗೂರು.ಅ.೧೭; ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಮತ್ತು ದೇಶದ ಬಗೆಗೆ ಸ್ವಾಭಿಮಾನ ಬೆಳೆದು ಬರುವ ಅಗತ್ಯವಿದೆ. ಋಷಿಮುನಿಗಳು ಮತ್ತು ಆಚಾರ್ಯರು ಕೊಟ್ಟ ವಿಚಾರ ಧಾರೆಗಳಿಂದ ಧರ್ಮ ಮತ್ತು ದೇಶ ಬೆಳೆದುಕೊಂಡು ಬಂದಿದೆ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಶಿಕ್ಷಣದಿಂದ ಮನುಷ್ಯನ ಬುದ್ಧಿ ಶಕ್ತಿ ವಿಕಾಸಗೊಂಡರೆ ಧರ್ಮದಿಂದ ಭಾವನೆಗಳು ವಿಕಾಸಗೊಳ್ಳಲು ಸಾಧ್ಯ. ಬದುಕಿ ಬಾಳುವ ಮನುಷ್ಯನಿಗೆ ಬುದ್ದಿ ಶಕ್ತಿ ಭಾವನೆಗಳೆರಡರ ಅವಶ್ಯಕತೆಯಿದೆ. ಭೌತಿಕ ಬದುಕು ಶ್ರೀಮಂತಗೊAಡರಷ್ಟೇ ಸಾಲದು. ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯ ಸುಂದರ ಸಂಸ್ಕೃತಿಯ ಪರಿಪಾಲನೆಯಿಂದ ಬದುಕು ಬಲಗೊಳ್ಳಲು ಸಾಧ್ಯವಿದೆ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿತಗೊಳ್ಳಲು ಧರ್ಮ ಪ್ರಜ್ಞೆ ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟಿçÃಯ ಪ್ರಜ್ಞೆ ಬೆಳೆದು ಬರುವ ಅವಶ್ಯಕತೆಯಿದೆ. ಸಮಸ್ತ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ ಎಂಬುದನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅಸುರೀ ಶಕ್ತಿಗಳು ನಿರ್ನಾಮಗೊಂಡು ದೈವೀ ಶಕ್ತಿಗಳನ್ನು ಬೆಳೆಸುವುದೇ ಧರ್ಮದ ಮೂಲ ಧ್ಯೇಯವಾಗಿದೆ ದೇಶ ಧರ್ಮ ಸಂರಕ್ಷಣೆಯಲ್ಲಿ ಈ ನಾಡಿನ ಋಷಿ ಮುನಿಗಳ ಆಚಾರ್ಯರ ಸಂತ ಮಹಾತ್ಮರ ವಿಚಾರ ಧಾರೆಗಳು ಜನಸಮುದಾಯದ ಉನ್ನತಿಗೆ ಕಾರಣವಾಗಿವೆ ಎಂಬುದನ್ನು ಯಾರೂ ಮರೆಯಬಾರದೆಂದರು.ದೇಶ-ಧರ್ಮ ಸಂರಕ್ಷಣೆಯಲ್ಲಿ ಮಠಾಧೀಶರ ಪಾತ್ರ ವಿಷಯವನ್ನಾಧರಿಸಿ ಉಪನ್ಯಾಸ ನೀಡಿದ ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಖಾದಿ ಖಾಕಿ ಖಾವಿ ದೇಶ ಸಂರಕ್ಷಣೆಯ ಬಹು ದೊಡ್ಡ ಜವಾಬ್ದಾರಿ ಹೊತ್ತಿರುವುದು ಸತ್ಯ. ಅವರವರ ಕರ್ತವ್ಯ ಜವಾಬ್ದಾರಿ ಅರಿತು ಬಾಳಿದರೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ. ದೇಶ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ ಎಂಬುದುರ ಬಗೆಗೆ ಅರಿವು ಹೊಂದಿರಬೇಕಾಗುತ್ತದೆ. ಸ್ವಾಭಿಮಾನದ ಕೊರತೆಯಿಂದಾಗಿ ಧರ್ಮದಲ್ಲಿ ಮತ್ತು ದೇಶದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮಾನವನನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ಧರ್ಮದ ಗುರಿಯಾಗಿದೆ ಎಂದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಬಿತ್ತಿದ ಬೀಜಕ್ಕೆ ನೀರು ಗೊಬ್ಬರ ಹೇಗೆ ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕವಾಗಿದೆ. ಸಮರ ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದೇ ಮಹಾತ್ಮರ ಗುರಿಯಾಗಿದೆ ಎಂದರು.