ಧರ್ಮ ದಂಗಲ್ ನಡೆಸಿದ್ದೆ ಅನ್ಸಾರಿ ಸಾಧನೆ: ಭೀಮಾಶಂಕರ್


ಸಂಜೆವಾಣಿ ವಾರ್ತೆ
ಗಂಗಾವತಿ, ಏ.10 : ಶಾಂತಿಯ ತೋಟದಂತಿದ್ದ ಗಂಗಾವತಿಯಲ್ಲಿ ಧರ್ಮದಂಗಲ್ ನಿರ್ಮಾಣ ಮಾಡಿದ್ದೇ ಇಕ್ಬಾಲ್ ಅನ್ಸಾರಿ. ರಾಜಕೀಯದ ಬಹುದೊಡ್ಡ ಸಾಧನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಆರೋಪಿಸಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಗಾಲಿ ಜನಾರ್ಧನ ರೆಡ್ಡಿ ಅವರ ಬಗ್ಗೆ ಇಕ್ಬಾಲ್ ಅನ್ಸಾರಿ ಇತ್ತೀಚೆಗೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಭೀಮಾಶಂಕರ್ ಪಾಟೀಲ್, ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಭಿವೃದ್ಧಿ ವಿಚಾರಗಳನ್ನು ಬಿಟ್ಟು ಜನಾರ್ಧನ ರೆಡ್ಡಿ ಅವರ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡುತ್ತಿರುವುದು ಗಮನಿಸಿದರೆ ಗಂಗಾವತಿಯ ಅಖಾಡದಲ್ಲಿ ಇಕ್ಬಾಲ್ ಅನ್ಸಾರಿ ಸೋಲೋಪ್ಪಿಕೊಂಡಂತೆ ಭಾಸವಾಗುತ್ತಿದೆ.
ಗಂಗಾವತಿಯಲ್ಲಿ ಕೋಮು ದಳ್ಳೂರಿಗಳನ್ನು ನಿರ್ಮಾಣ ಮಾಡಿದ್ದೇ ಅನ್ಸಾರಿ ಅವರ ರಾಜಕೀಯದ ಬಹುದೊಡ್ಡ ಸಾಧನೆ. ಕಳೆದ 20 ವರ್ಷದ ಹಿಂದೆ ಅನ್ಸಾರಿ ಹಚ್ಚಿದ್ದ ಕೋಮಿನ ಕಿಚ್ಚು ಈಗಲೂ ಉರಿಯುತ್ತಿದೆ. ಆದರೆ ಭಾವೈಕ್ಯತೆ ಬೆಸುಗೆಯಂತೆ ಕೆಲಸ ಮಾಡಲು ಹೊರಟಿರುವ ಜನಾರ್ಧನ ರೆಡ್ಡಿ ಅವರನ್ನು ಕ್ಷೇತ್ರದಲ್ಲಿ ಜನ ಸ್ವಾಗತಿಸುತ್ತಿರುವ ಪರಿಯಿಂದ ಬೆಚ್ಚಿ ಬಿದ್ದಿರುವ ಅನ್ಸಾರಿ, ಮುಸಲ್ಮಾನರ ಓಟ್ ಬ್ಯಾಂಕ್ ಕೈ ತಪ್ಪುವ ಭೀತಿಯಿಂದ ರೆಡ್ಡಿ ಅವರ ಬಗ್ಗೆ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ.
ಜನಾರ್ಧನ ರೆಡ್ಡಿ ಅವರು ಸಚಿವರಾಗಿದ್ದಾಗ ಬಳ್ಳಾರಿ ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಮಾಡಿರುವ ಕೆಲಸಗಳನ್ನು ಜನ ಇಂದಿಗೂ ಹೃದಯ ಮಂದಿರದಲ್ಲಿಟ್ಟು ಸ್ಮರಿಸುತ್ತಾರೆ.
ಜನಾರ್ಧನ ರೆಡ್ಡಿಯವರ ವಿರುದ್ಧ ಮಾತನಾಡುವ ಯಾವುದೇ ನೈತಿಕ ಹಕ್ಕು ಇಲ್ಲ. ಗಂಗಾವತಿಯ ಮತದಾರರು ಅದರಲ್ಲೂ ಯುವ ಮತದಾರರು ಸಾಕಷ್ಟು ಪ್ರಬುದ್ಧರಾಗಿದ್ದಾರೆ.ಧರ್ಮ ಮತ್ತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಜನರ ದಾರಿ ತಪ್ಪಿಸಲು ಯತ್ನಿಸುತ್ತಿರುವ ಅನ್ಸಾರಿ ಅವರಿಗೆ ಈ ಬಾರಿ ಗಂಗಾವತಿ ಕ್ಷೇತ್ರದ ಜನ ಸರಿಯಾದ ಪಾಠ ಕಲಿಸಲಿದ್ದಾರೆ.