ಧರ್ಮ ಕಾರ್ಯದಿಂದ ಮನಸ್ಸಿಗೆ ಶಾಂತಿ, ಸಮಾಧಾನ

ಬೀದರ್:ಮಾ.3:ಧರ್ಮ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಇಂತಹ ಶಾಂತಿಯು ಎಷ್ಟೇ ಹಣ ಕೊಟ್ಟರೂ ಸಿಗಲಾರದು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಜನವಾಡಾದಲ್ಲಿ ಶ್ರೀಮಠ ಚಾರಿಟೇಬಲ್ ಟ್ರಸ್ಟ್‍ನಿಂದ ಮಹಾಶಿವರಾತ್ರಿ 7 ನೇ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಗುಡ್ಡಾಪುರ ದಾನಮ್ಮ ದೇವಿ ಮಹಾಪುರಾಣ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೂಜ್ಯ ಡಾ. ಶಾಂತವೀರ ಶಿವಾಚಾರ್ಯರು 11 ದಿನಗಳಿಂದ ಇಲ್ಲಿ ಪ್ರವಚನ ನಡೆಸಿಕೊಡುತ್ತಿರುವಾಗಲೇ ರಾಜ್ಯ ಸರಕಾರವು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಆಚರಣೆ ಕುರಿತು ಆದೇಶ ಹೊರಡಿಸಿದೆ. ಸಂತರ, ಶರಣರ ಲೀಲೆ ಅಪಾರ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.

ಪೂಜೆಯಿಂದ ಲಭಿಸುವ ಶಾಂತಿ ಅವರ್ಣನೀಯ. ಈ ಪೂಜೆಯಿಂದಲೇ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವನೆ ಬೆಳೆಯುತ್ತದೆ. ಎಲ್ಲರನ್ನು ಸಮಾನವಾಗಿ ಕಾಣಲು ಸಾಧ್ಯವಾಗುತ್ತದೆ. ಕಷ್ಟದಲ್ಲಿದ್ದವರತ್ತ ನೆರವಿನ ಹಸ್ತ ಚಾಚುವ ಪ್ರೇರಣೆ ಸಿಗುತ್ತದೆ ಎಂದು ಸೂರ್ಯಕಾಂತ್ ಹೇಳಿದರು.

ಲಿಂಗಾಯತ ಧರ್ಮವು ಸರ್ವರನ್ನು ಸಮಾನವಾಗಿ ಕಾಣುತ್ತದೆ. ಲಿಂಗಾಯತರು ಯಾವುದೇ ಭೇದ ಮಾಡುವುದಿಲ್ಲ. ಲಿಂಗಾಯತರು ಇರುವಲ್ಲಿ ಶಾಂತಿ, ಸಾಮರಸ್ಯ ನೆಲೆಸಿರುತ್ತದೆ ಎಂದರು.

ಪೂಜ್ಯರಾದ ಡಾ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಬಸಯ್ಯ ಸ್ವಾಮಿಗಳು, ಶಾಂತಕುಮಾರ ಪನಸಾಲೆ, ರಾಜೇಂದ್ರ ಪೂಜಾರಿ, ಸಂಜುಕುಮಾರ ಸಿದ್ದಾಪುರ, ಬಸವರಾಜ ಪಾಟೀಲ್ ಮತ್ತಿತರ ಗಣ್ಯರು, ಊರಿನ ಹಿರಿಯರು ಪಾಲ್ಗೊಂಡಿದ್ದರು.