ಧರ್ಮೇಗೌಡರ ಸಾವು ರಾಜಕೀಯ ಬೇಡ: ಡಿಕೆಶಿ

ಬೆಂಗಳೂರು, ಡಿ. ೨೯- ಉಪಸಭಾಪತಿ ಎಸ್.ಎಲ್. ಧರ್ಮೇಗೌಡರ ಸಾವನ್ನು ರಾಜಕೀಕರಣಗೊಳಿಸುವುದು ಬೇಡ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಧರ್ಮೇಗೌಡರ ಸಾವು ರಾಜಕೀಯ ಕೊಲೆ ಎಂಬಂತೆ ಬಿಂಬಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಧರ್ಮೇಗೌಡರ ಸಾವು ಆಘಾತ ತಂದಿದೆ. ಸಂಯಮ ಒಳ್ಳೆಯ ವ್ಯಕ್ತಿತ್ವವನ್ನು ಧರ್ಮೇಗೌಡರು ಹೊಂದಿದ್ದರು. ಈ ರೀತಿ ಅವರ ಸಾವು ಆಗಬಾರದಿತ್ತು ಎಂದರು.
ಉಪಸಭಾಪತಿ ಧರ್ಮೇಗೌಡರ ಸಾವು ರಾಜಕೀಯ ಕೊಲೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ಪರೋಕ್ಷವಾಗಿ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರುಗಳು ಧರ್ಮೇಗೌಡರನ್ನು ಸಭಾಪತಿ ಸ್ಥಾನದಿಂದ ಎಳೆದು ನೂಕಿ ಅವಾಂತರ ಸೃಷ್ಟಿಯಿಂದ ಅವರು ಆಘಾತಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದಂತಿದೆ ಈ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ. ಶಿವಕುಮಾರ್ ನಿರಾಕರಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ಸಾವನ್ನು ರಾಜಕೀಕರಣಗೊಳಿಸುವುದು ಬೇಡ ಎಂದರು.
ಧರ್ಮೇಗೌಡರ ಆತ್ಮಹತ್ಯೆ ಬಗ್ಗೆ ೩-೪ ರೀತಿಯಲ್ಲಿ ವಿಚಾರಗಳು ಕೇಳಿ ಬರುತ್ತಿವೆ. ಎಲ್ಲ ಮಾಹಿತಿ ತಿಳಿದುಕೊಂಡು ಈ ಬಗ್ಗೆ ಮಾತನಾಡಬೇಕಾಗುತ್ತದೆ. ಮೊದಲೇ ಈ ಸಾವಿಗೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದರು.