ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರಿಂದ ನೋಟ್ ಬುಕ್ ವಿತರಣೆ

ದೇವನಹಳ್ಳಿ.ನ೫:೨೦೨೦-೨೧ರ ಶೈಕ್ಷಣಿಕ ವರ್ಷ ಕೊರೋನಾದಿಂದ ಬಂದ್ ಆಗಿದ್ದು ಮುಂದಿನ ದಿನಗಳಲ್ಲಿ ತೆರೆಯುವ ಸೂಚನೆ ಕಾಣುತ್ತಿದೆ, ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ.ಕೆ. ನಾರಾಯಣಸ್ವಾಮಿಯವರು ನೋಟ್‌ಬುಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಹೆಗ್ಗಡೆಯವರನ್ನು ಬೇಟಿ ಮಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ನೋಟ್‌ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಬಿ.ಕೆ. ನಾರಾಯಣಸ್ವಾಮಿಯವರ ಎಸ್.ಕೆ.ಜೆ.ಎಸ್ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ಅವರಿಗೆ ಶಿಕ್ಷಣದ ಬಗ್ಗೆ ಎಂತಾ ಕಾಳಜಿ ಇದೆ ಎನ್ನುವುದನ್ನು ತೋರಿಸುತ್ತದೆ, ಇದೇ ರೀತಿ ಇನ್ನೂ ಹಲವಾರು ಕಾರ್ಯಯೋಜನೆ ಸಿದ್ದಪಡಿಸಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಿ, ಶ್ರೀ ಮಂಜುನಾಥಸ್ವಾಮಿಯ ಕೃಪಾಕಟಾಕ್ಷ ಅವರಿಗೆ ಲಭಿಸಲಿ ಎಂದರು.
ಬಿ.ಕೆ. ನಾರಾಯಣಸ್ವಾಮಿ ಮಾತನಾಡಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ರಾಜ್ಯಾಧ್ಯಂತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಅವರಿಗೆ ವಿವಿಧ ರೀತಿಯ ಕೆಲಸ ಮಾಡಲು ಅನುಕೂಲ, ಆರ್ಥಿಕವಾಗಿ ಸಹಾಯ, ಕೃಷಿಕರಿಗೆ ಯಂತ್ರದಾರೆ ಮುಖಾಂತರ ಆದುನಿಕ ಕೃಷಿಗೆ ಯಂತ್ರಗಳ ಕೊಡುಗೆ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸ ಮಾಡುವ ಮುಖಾಂತರ ಸಾವಿರಾರು ಜನರಿಗೆ ಕೆಲಸ ನೀಡಿದ್ದಾರೆ ಎಂದರು.
ಈ ಸಮಯದಲ್ಲಿ ಗೌರವಾಧ್ಯಕ್ಷ ಜಯರಾಮೇಗೌಡ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಆರ್‌ಕೆ ನಂಜೇಗೌಡ, ಕೋಶಾಧ್ಯಕ್ಷ ಅಶ್ವತ್ಥನಾರಾಯಣಗೌಡ, ಕುಂದಾಣ ಹೋಬಳಿ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಸುರೇಶ್, ಶ್ರೀಮತಿ ಲಕ್ಷ್ಮೀ ನಾರಾಯಣಸ್ವಾಮಿ ಇದ್ದರು.