ಧರ್ಮಾಧರಿತ ನೈತಿಕ ಶಿಕ್ಷಣದ ನಿರ್ಧಾರ ಕೈ ಬಿಡಲು ಎಐಡಿಎಸ್‍ಓ ಆಗ್ರಹ

ಕಲಬುರಗಿ,ನ.25-ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಹೆಸರಿನಲ್ಲಿ ಧಾರ್ಮಿಕ ಗುರುಗಳನ್ನು ಕರೆಸಿ, ಕಾರ್ಯಗಾರವನ್ನು ನಡೆಸಿ, ಅವರುಗಳ ಅಭಿಪ್ರಾಯವನ್ನು ಪಡೆಯಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೇಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಉಗ್ರವಾಗಿ ಖಂಡಿಸಿದ್ದಾರೆ.
ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಅತ್ಯಗತ್ಯ. ಮಹಾನ್ ಮಾನವತಾವಾದಿ ಮೌಲ್ಯಗಳು, ಪ್ರಜಾತಂತ್ರ ಮೌಲ್ಯಗಳು, ಪ್ರಗತಿಪರ ಚಿಂತನೆಗಳನ್ನು ಒಳಗೊಂಡ ನೈತಿಕ ಪಠ್ಯಕ್ರಮವನ್ನು ರಚಿಸಬೇಕಾದುದು ಧಾರ್ಮಿಕ ಗುರುಗಳಲ್ಲ, ಬದಲಿಗೆ ವೈಜ್ಞಾನಿಕ, ಧರ್ಮನಿರಪೇಕ್ಷ ನೆಲೆಗಟ್ಟಿನ ಮೇಲೆ ಶಿಕ್ಷಣ ತಜ್ಞರು, ವಿಜ್ಞಾನಿಗಳು ರಚಿಸಬೇಕು ಮತ್ತು ಅಂತಹ ನೈತಿಕ ಮೌಲ್ಯಗಳನ್ನು ರೂಪಿಸುವಾಗ ದೇಶದ ನವೋದಯ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಂ ಮೋಹನ್ ರಾಯ್, ಜ್ಯೋತಿಬಾ ಫುಲೆ ಮುಂತಾದವರ ಬೋಧನೆಗಳು, ಪ್ರಗತಿಪರ, ಮಾನವತಾವಾದಿ ಕವಿಗಳಾದ ಕುವೆಂಪು, ಕುದ್ಮಲ್ ರಂಗರಾಯರು, ಎ.ಎನ್. ಮೂರ್ತಿರಾಯರ, ದ.ರಾ. ಬೇಂದ್ರೆ, ಸುಬ್ರಮಣ್ಯ ಭಾರತಿಯಾರ್ ಅಯ್ಯಂಕಾಳಿ, ಪಂಡಿತ್ ತಾರಾನಾಥ್ ಮುಂತಾದವರ ಕೃತಿಗಳು, ಅಥವಾ ದೇಶದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಆಧಾರವಾಗಿಟ್ಟುಕೊಂಡು ಮಾಡಬೇಕು. ಮಹಾನ್ ವ್ಯಕ್ತಿಗಳು ಶಿಕ್ಷಣ ಮತ್ತು ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದನ್ನು ವಿರೋಧಿಸಿರುವ ಕಾರಣವೇ, ಅದು ಜನತೆಯಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಬದಲು ಮೌಢ್ಯ ತುಂಬುತ್ತದೆ ಮತ್ತು ಭಾರತದಂತಹ ಬಹುಧರ್ಮೀಯ ರಾಷ್ಟ್ರದಲ್ಲಿ ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು ತರುವ ಬದಲು ಒಡಕನ್ನು ತಂದು ಐಕ್ಯತೆ ಹಾಗೂ ಸಹಬಾಳ್ವೆಯನ್ನು ನಾಶಪಡಿಸುತ್ತದೆ ಎಂದು. ಈ ಕೂಡಲೇ ಧರ್ಮಾಧಾರಿತ ನೈತಿಕ ಶಿಕ್ಷಣದ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕದ ಈ ಸಂದರ್ಭದಲ್ಲಿ ಅವರ ಮತ್ತು ಅಂತಹ ಮಹಾನ್ ಕ್ರಾಂತಿಕಾರಿಗಳ ಜೀವನ ಕುರಿತ ನೈತಿಕ ಪಾಠ ಇಂದಿಗೆ ಅತ್ಯಂತ ಪ್ರಸ್ತುತವಾಗಿದೆ. ಜೊತೆಗೆ, ಸ್ವಾತಂತ್ರ್ಯ ಹೋರಾಟಗಾರರು, ನವೋದಯ ಚಿಂತಕರು, ಪ್ರಗತಿಪರ ಕನ್ನಡ ಬರಹಗಾರರ ಕೃತಿಗಳಿಂದ ನೈತಿಕ ಪಾಠದ ಅಗತ್ಯವಿದೆ. ಶಿಕ್ಷಣವು ಪ್ರಜಾತಾಂತ್ರಿಕ, ವೈಜ್ಞಾನಿಕ ಹಾಗೂ ಧರ್ಮನಿರಪೇಕ್ಷವಾಗಿ ಇರಬೇಕು ಎಂದು ಎಐಡಿಎಸ್‍ಓ ಪ್ರತಿಪಾದಿಸುತ್ತದೆ ಮತ್ತು ಅದಕ್ಕೆ ಧಕ್ಕೆಯಾಗುವ ಯಾವುದೇ ಪ್ರಯತ್ನವನ್ನು ವಿರೋಧಿಸುತ್ತದೆ. ಸರ್ಕಾರದ ಇಂತಹ ಕುಟಿಲ ಪ್ರಯತ್ನಗಳನ್ನು ಸೋಲಿಸಲು ರಾಜ್ಯದ ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರು ಒಂದಾಗಿ, ಹೋರಾಟಕ್ಕೆ ಸಜ್ಜಾಗಬೇಕು ಎಂದು ಕಾಮತ್ ಕರೆ ನೀಡಿದ್ದಾರೆ.