ಧರ್ಮಸ್ಥಳ ಸಂಸ್ಥೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.07: ಕಳೆದ 41 ವರ್ಷಗಳ ಹಿಂದೆ ಸಾಮಾಜಿಕ ಸೇವೆಯ ಮೂಲಕ ಗ್ರಾಮೀಣ ಅಭಿವೃದ್ದಿಯ ಸದುದ್ದೆಶದಿಂದ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ಇಂದು ರಾಜ್ಯದ ಉದ್ದಗಲಕ್ಕೂ ತನ್ನ ಸೇವಾ ಕಾರ್ಯಗಳನ್ನು ವಿಸ್ತರಿಸಿಕೊಂಡಿದೆ. ಗ್ರಾಮೀಣ ಅಭಿವೃದ್ದಿಯ ಜೊತೆಗೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ಸಂಸ್ಥೆ ನಿರುದ್ಯೋಗ ಸಮಸ್ಯೆಯ ಪರಿಹಾರಕ್ಕೂ ದಾರಿ ತೋರಿಸುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಛೇರಿಯಲ್ಲಿ ಆಯೋಜಿಸಿದ್ದ ಯೋಜನೆಯ ಸೇವಾ ಪ್ರತಿನಿಧಿಗಳ ಸಾಧಕ ಪುರಸ್ಕಾರ ಮತ್ತು ತಾಲೂಕು ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಕಾಪು ತಾಲೂಕಿಗೆ ವರ್ಗಾವಣೆಯಾದ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಹಾಗೂ ರಾಯಚೂರು ಜಿಲ್ಲೆಗೆ ವರ್ಗಾವಣೆಗೊಂಡ ಯೋಜನೆಯ ಚನ್ನರಾಯಪಟ್ಟಣ ಎಂಐಎಸ್ ಯೋಜನಾಧಿಕಾರಿ ತಿಲಕ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವರ್ಗಾವಣೆಗೊಂಡ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಮತ್ತು ಚನ್ನರಾಯಪಟ್ಟಣ ಜಿಲ್ಲೆಯ ಎಂಐಎಸ್ ಯೋಜನಾಧಿಕಾರಿ ತಿಲಕ್ ಅವರ ಸೇವೆಯನ್ನು ಸ್ಮರಿಸಿ ಅಭಿನಂಧಿಸಿದ ಕೇಶವ ದೇವಾಂಗ ನೀರು ಹರಿಯುತ್ತಿದ್ದರೆ ಅದು ಸದಾ ಪರಿಶುದ್ದವಾಗಿರುತ್ತದೆ. ನೌಕರರಿಗೆ ವರ್ಗಾವಣೆ ಎನ್ನುವುದು ಹರಿಯುವ ನೀರಿನಿಂತೆ. ಬೇರೆ ಬೇರೆ ಸ್ಥಳಗಳಲ್ಲಿ ಅವರು ಸೇವೆ ಸಲ್ಲಿಸಿದಷ್ಟೂ ಅವರ ಲೋಕಾನುಭವ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ವರ್ಗಾವಣೆಗೊಂಡ ನೌಕರರ ಸೇವೆ ಎಲ್ಲಾ ಕಡೆಗೂ ವಿಸ್ತರಿಸಬೇಕು ಎನ್ನುವ ಕಾರಣಕ್ಕೆ ಧರ್ಮಸ್ಥಳ ಸಂಸ್ಥೆಯಲ್ಲಿ ಕನಿಷ್ಠ 03 ರಿಂದ ಗರಿಷ್ಠ 05 ವರ್ಷಗಳ ವರೆಗೆ ಮಾತ್ರ ಒಬ್ಬ ನೌಕರ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ. ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಯಾರ ಮೂಲಕವಾದರೂ ಪ್ರಭಾವ ಬೀರಲು ಯತ್ನಿಸಿದರೆ ಅಂತಹ ನೌಕರರನನ್ನು ಕಡ್ಡಾಯವಾಗಿ ಸೇವಾ ಕ್ಷೇತ್ರದಿಂದ ಹೊರಗಿಡಲಾಗುತ್ತದೆ ಎಂದರು. ಮಮತಾಶೆಟ್ಟಿ ಅವರಿಗೆ ಇಲ್ಲಿನ ಸೇವಾ ಪ್ರತಿನಿಧಿಗಳು ಕಣ್ಣೀರು ಹಾಕುವ ಮೂಲಕ ಬೀಳ್ಕೊಡುತ್ತಿರುವುದನ್ನು ನೋಡಿದರೆ ಅವರ ಸೇವಾ ದಕ್ಷತೆ ಮತ್ತು ಗಳಿಸಿದ ಪ್ರೀತಿ ಎದ್ದು ಕಾಣುತ್ತಿದೆ. ಧರ್ಮಸ್ಥಳ ಸಂಸ್ಥೆ ಅವರಿಗೆ ನೀಡಿದ ಸೇವಾ ಜವಾಬ್ದಾರಿಯನ್ನು ಮಮತಾಶೆಟ್ಟಿ ಸಮರ್ಥವಾಗಿ ನಿರ್ವಹಿಸಿದ್ದಾರೆಂದು ಕೇಶವ ದೇವಾಂಗ ಅಭಿನಂಧಿಸಿದರು.
ಅಭಿನಂದನಾ ನುಡಿಗಳನ್ನಾಡಿದ ಸಮಾಜ ಸೇವಕ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಘಗಳಿಗೆ 120ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಸಾಲ ಸೌಲಭ್ಯ ಕೊಡಿಸಿ ಒಂದೇ ಒಂದು ರೂಪಾಯಿ ಹಣವು ಸುಸ್ತಿಯಾಗದಂತೆ ಎಚ್ಚರ ವಹಿಸಿ ಶೇ.100ರಷ್ಟು ಸಾಲ ಮರುಪಾವತಿಯಾಗಿರುವ ತಾಲೂಕು ಎಂದು ಮೈಸೂರು ವಿಭಾಗದ 44 ತಾಲೂಕುಗಳ ಪೈಕಿ ಮೊದಲ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಿ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾರೆ. ತಾಲೂಕಿನಲ್ಲಿ ಕೆರೆಗಳ ಹೂಳೆತ್ತಿಸಿ ಜಲ ಮರುಪೂರಣ ಮಾಡಿಸಿ ಖಾಲಿಯಾಗಿದ್ದ ಕೆರೆಗಳಲ್ಲಿ ಜೀವಜಲ ಉಕ್ಕುವಂತೆ ಮಾಡಿದ್ದಾರೆ. ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸಿ 500ಕ್ಕೂ ಹೆಚ್ಚಿನ ಕುಟುಂಬಗಳು ದುಶ್ಚಟಗಳಿಂದ ಮುಕ್ತವಾಗಿ ಸಂತೋಷದಿಂದ ತಮ್ಮ ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಜೀವನ ನಡೆಸಲು ಕಾರಣರಾಗಿರುವ ಮಮತಾಶೆಟ್ಟಿ ಅವರ ವರ್ಗಾವಣೆಯು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳ ಮನಸ್ಸಿಗೆ ನೋವಾಗಿದ್ದರೂ ಅನಿವಾರ್ಯವಾಗಿದೆ. ಅವರು ವರ್ಗಾವಣೆಗೊಂಡಿರುವ ಉಡುಪಿಯ ಕಾಪು ತಾಲೂಕಿನಲ್ಲಿಯೂ ಕೆ.ಆರ್.ಪೇಟೆ ತಾಲೂಕಿನಲ್ಲಿ ಮಾಡಿರುವಂತೆ ಉತ್ತಮವಾಗಿ ಕೆಲಸ ಮಾಡಿ ಅಲ್ಲಿಯೂ ಹೆಸರುಗಳಿಸಲಿ ಎಂದು ಮಲ್ಲಿಕಾರ್ಜುನ್ ಶುಭ ಹಾರೈಸಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಹಿರಿಯ ಪತ್ರಕರ್ತರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಮರುವನಹಳ್ಳಿಬಸವರಾಜು, ತಾಲೂಕು ಜ್ಞಾನವಿಕಾಸ ಅಧಿಕಾರಿ ಕಾವ್ಯಲೋಕೇಶ್, ಮೇಲ್ವಿಚಾರಕರಾದ ಶಿಲ್ಪಾ, ಮಮತಾ, ಎಂಐಎಸ್ ಯೋಜನಾಧಿಕಾರಿ ತಿಲಕ್ ಸೇರಿದಂತೆ ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.
ವರ್ಗಾವಣೆಗೊಂಡ ಯೋಜನಾಧಿಕಾರಿ ಮಮತಾಶೆಟ್ಟಿ ಮಾತನಾಡಿ ಕಳೆದ 05 ವರ್ಷಗಳಿಂದ ತಮಗೆ ಅಗತ್ಯ ಸಹಕಾರ ನೀಡಿ ಧರ್ಮಸ್ಥಳ ಸಂಸ್ಥೆಯ ಯೋಜನೆಗಳ ವಿಸ್ತರಣೆಗೆ ಕಾರಣಕರ್ತರಾದ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮಗಳ ಮುಖಂಡರು, ಪತ್ರಕರ್ತರು ಸೇರತಿದಂತೆ ತಾಲೂಕಿನ ಜನತೆಗೆ ಹೇದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.