ಧರ್ಮಸ್ಥಳ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.14: ತಾಲೂಕಿನ ವಳಗೆರೆಮೆಣಸ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಗತಿ ಬಂಧು ಸ್ತ್ರೀಶಕ್ತಿ ಸ್ವಸಾಯ ಸಂಘಗಳ ಕೆ.ಆರ್.ಪೇಟೆ ವಲಯದ ವಳಗೆರೆ ಮೆಣಸ ಒಕ್ಕೂಟದ ಸಾಧನ ಸಮಾವೇಶ, ರಾಮರಕ್ಷಾ ಸ್ತೋತ್ರ, ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗುಡಿ ಕೈಗಾರಿಕೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದಲ್ಲದೆ ಧಾರ್ಮಿಕ ಸಂಸ್ಕಾರ ಹಾಗೂ ಶ್ರದ್ದೆಯನ್ನು ಮೂಡಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಹಿಳೆಯರನ್ನು ಗುರುತಿಸಿ ವೃತ್ತಿ ಕೌಶಲ್ಯ ತರಬೇತಿ ಮಾರ್ಗದರ್ಶನ ನೀಡುವ ಜೊತೆಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯವನ್ನು ಕೊಡಿಸಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲೀಕರಣ ಸಾಧಿಸಲು ಉತ್ತೇಜನ ನೀಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೆ.ಆರ್.ಪೇಟೆ ತಾಲೂಕಿಗೆ ಪಾದಾರ್ಪಣೆ ಮಾಡಿದ ನಂತರ ಹೆಣ್ಣು ಮಕ್ಕಳ ಆರ್ಥಿಕ ಸ್ಥಿತಿ ಗತಿ, ಶೈಕ್ಷಣಿಕ ಮಟ್ಟ ಹಾಗೂ ಗ್ರಾಮ ವಿಕಾಸವು ಸಕಲ “ರೀತಿಯಲ್ಲಿಯೂ ಸಮೃದ್ಧವಾಗಿದೆ. ಕುಡಿತ ಸೇರಿದಂತೆ ದುಶ್ಚಟಗಳ ನಿರ್ಮೂಲನೆಗೆ ಪಣತೊಟ್ಟಿರುವ ಯೋಜನೆಯು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಗ್ರಾಮ ಅಭಿವೃದ್ಧಿಗೆ ಹಾಗೂ ಮಹಿಳಾ ಸಬಲೀಕರಣಕ್ಕೆ ಕೇಳಿದ್ದನ್ನೆಲ್ಲ ನೀಡುವ ಕಾಮಧೇನುವಂತೆ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಆರ್‍ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಅಗ್ರಹಾರ ಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಿಕುಮಾರ್,ಸದಸ್ಯ ರಮಾನಂದ್, ನೇತ್ರಾವತಿಕುಮಾರ್, ಶಶಿರೇಖಾ ಅಶೋಕ್, ಜಯಂತಿ ರವೀಂದ್ರ, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಂತೇಬಾಚಹಳ್ಳಿ ರವಿಕುಮಾರ್, ಸಿ.ಆರ್.ಪಿ.ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕಾವ್ಯ, ಮಮತಾ, ಹರಿಣಾಕ್ಷಿ, ಮುಖ್ಯ ಶಿಕ್ಷಕ ಕುಮಾರ್, ವಿ.ಎನ್.ಮಹಾದೇವೇಗೌಡ, ಸೇರಿದಂತೆ ವಳಗೆರೆಮೆಣಸ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಾವಿರಾರು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೇಬಿ ಹನ್ಸಿಕಾ ಮತ್ತು ತಂಡದವರು ನೀಡಿದ ಭರತನಾಟ್ಯ ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಸಾರ್ವಜನಿಕರನ್ನು ರಂಜಿಸಿದವು.