ಧರ್ಮಸ್ಥಳ ಸಂಸ್ಥೆ ಬಡವರ ಸಂಜೀವಿನಿ : ಡಾ. ಉದಗೀರೆ

ಔರಾದ್ : ಆ.2:ಧರ್ಮಸ್ಥಳ ಸಂಸ್ಥೆ ಬಡವರ ಸಂಜೀವಿನಿಯಾಗಿದೆ. ಗ್ರಾಮೀಣ ಜನರ ಬದುಕಿನ ಸುಧಾರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಪಾತ್ರ ದೊಡ್ಡದು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಾ. ಶಾಲಿವಾನ ಉದಗೀರೆ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಯೋಜನೆಯಡಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಈ ಸಂಸ್ಥೆ ನಿರಂತರವಾಗಿ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆರ್ಥಿಕ ನೆರವಿನ ಮೂಲಕ ಸ್ವಾವಲಂಬನೆಯ ದಾರಿ ತೋರಿಸುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖೀ ಚಿಂತನೆಗ???ಂದಿಗೆ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡುತ್ತಿದೆ ಎಂದರು. ಎಲ್ಲರೂ ಆರೋಗ್ಯದ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ರಾಘವೇಂದ್ರ. ಯು. ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅನೇಕ ಜನಪರ, ಬಡವರ ಪರವಾಗಿ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಹತ್ತಾರು ಕೆಲಸಗಳು ಮಾಡಿದ್ದು, ಕಳೆದ ಬಾರಿ ಮಹಿಳೆಯರಿಗೆ ಕಣ್ಣು ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಾರಿ ಮಹಿಳೆಯರಿಗೆ ಥೈರಾಯ್ಡ್, ಶುಗರ್ ಮತ್ತು ಸಿಬಿಸಿ ತಪಾಸಣೆ ಮಾಡಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ಆಪ್ತಸಮಾಲೋಚಕಿ ಪುಷ್ಪಾಂಜಲಿ ಮಾತನಾಡಿ, ಏಡ್ಸ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತ ವಹಿಸಬೇಕು. ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಹಿಳಾ ಜ್ಞಾನ ವಿಕಾಸ ಕೇಂದ್ರದ ಯೋಜನಾಧಿಕಾರಿ ಶಕುಂತಲಾ ಮಾತನಾಡಿದರು.
ಈ ವೇಳೆ ಸುಮಾರು 50 ಕ್ಕೂ ಅಧಿಕ ಮಹಿಳೆಯರಿಗೆ ಥೈರಾಯ್ಡ್, ಶುಗರ್ ಮತ್ತು ಸಿಬಿಸಿ ತಪಾಸಣಾ ಮಾಡಲಾಯಿತು. ಮುಖಂಡ ಶರಣಪ್ಪ ಪಾಟೀಲ್, ಲ್ಯಾಬ್ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಶಾಪುರೆ, ರೇಖಾಬಾಯಿ, ಅಂಬಿಕಾ ಸೇರಿದಂತೆ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡರು. ಮೇಲ್ವಿಚಾರಕ ಲೋಕೇಶ ಸ್ವಾಗತಿಸಿದರು. ಮಹಿಳಾ ಜ್ಞಾನ ವಿಕಾಸದ ಮೇಲ್ವಿಚಾರಕಿ ಸಂಗೀತಾ ನಿರೂಪಿಸಿದರು.