ಧರ್ಮಸ್ಥಳ ಸಂಸ್ಥೆ ಧಾರ್ಮಿಕವಾಗಿ ಬೆಸೆಯುವ ಕೆಲಸ ಮಾಡುತ್ತಿದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.27: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಧಾರ್ಮಿಕವಾಗಿ ಜನರನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಮುಖಂಡರಾದ ಬಿ.ಟಿ.ವೆಂಕಟೇಶ್ ತಿಳಿಸಿದರು.
ಅವರು ತಾಲೂಕಿನ ಬೂಕನಕೆರೆ ವಲಯದ ಸಮುದಾಯ ಭವನದಲ್ಲಿ ನಡೆದ ಸಹಸ್ರ ಬಿಲ್ವಾರ್ಚನೆ ಮತ್ತು ಸಾಧಕ ಸಂಘ ಗುರುತಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯು ಗ್ರಾಮಾಭಿವೃದ್ದಿ ಹೆಸರಿನಲ್ಲಿ ಸಮಾಜದ ಅತ್ಯಂತ ಕೆಳವರ್ಗದ, ಆರ್ಥಿಕವಾಗಿ ಸಬಲರಾಗಿರುವ ಕುಟುಂಬಗಳ ಆರ್ಥಿಕ ಸಬಲೀಕರಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯ ಪರಂಪರೆಯನ್ನು ಸಾರುವ ದೇವಾಲಯಗಳ ಮರು ನಿರ್ಮಾಣ ಕಾಮಗಾರಿಗಳು, ಅಳಿವಿನ ಅಂಚಿನಲ್ಲಿರುವ ಕೆರೆಗಳ ಅಭಿವೃದ್ದಿ, ಅನಾಥ ಹಾಗೂ ವಿಧವೆಯರು ಮುಂತಾದವರಿಗೆ ಮಾಶಾಸನ ರೂಪದಲ್ಲಿ ನೆರವು, ಕುಟುಂಬಗಳ ಅಭಿವೃದ್ದಿಗೆ ಹಸು, ಕುರಿ, ಮೇಕೆಗಳ ಸಾಕಾಣಿಕೆಗೆ ಆರ್ಥಿಕ ಸಹಾಯ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡಲು ಯತ್ನಿಸುತ್ತಿರುವ ಶ್ರೀಕ್ಷೇತ್ರ ಸಂಸ್ಥೆಯು ಒಂದು ಸರ್ಕಾರ ಮಾಡುವ ಕೆಲಸಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ ಪೂಜ್ಯ ವೀರೇಂದ್ರಹೆಗ್ಗಡೆ ಮತ್ತು ಅಮ್ಮನವರಾದ ಹೇಮಾವತಿ ಅಮ್ಮನವರ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸಮಾಜದಲ್ಲಿನ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗಬೇಕೆಂಬ ಉದ್ದೇಶದಿಂದ ಹಲವಾರು ಮಾನದಂಡಗಳನ್ನು ಇಟ್ಟು ಕ್ಷೇತ್ರದಲ್ಲಿ ಕೆಳಹಂತದಿಂದಲೂ ಸಂಸ್ಕರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಕಳಕಳಿಯೊಂದಿಗೆ ನಮ್ಮ ಸಂಸ್ಥೆ ಜನರ ಕಲ್ಯಾಣಕ್ಕಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ್‍ಪ್ರಸಾದ್, ಮಹೇಶ್, ಅಡಿಕೆ ಸ್ವಾಮಿಗೌಡ, ಹೆಳವೇಗೌಡ, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಹಾಗೂ ಕುಮಾರ್, ಶುಭ, ವಿನೋದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉತ್ತಮ ನಿರ್ವಹಣೆ ಮಾಡುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡ ಸಾಧಕ ಸಂಘಗಳನ್ನು ಗುರುತಿಸಲಾಯಿತು.