ಧರ್ಮಸ್ಥಳ ಸಂಸ್ಥೆ ದೇಶಕ್ಕೆ ಮಾದರಿ

ಚೇಳೂರು, ನ. ೧೪- ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘಗಳನ್ನು ತೆರೆಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಅನೇಕ ಜನಪರ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ವೀರೇಂದ್ರ ಹೆಗ್ಗಡೆಯವರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಜಿಲ್ಲಾ ನಿರ್ದೇಶಕಿ ದಯಾಶೀಲ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ.ಎನ್. ಕೋಟೆ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ೫ ಲಕ್ಷಕ್ಕಿಂತ ಹೆಚ್ಚು ಸ್ವಸಹಾಯ ಸಂಘಗಳಿದ್ದು, ಸುಮಾರು ೪ ಲಕ್ಷ ಮಹಿಳಾ ಸ್ವಸಹಾಯ ಸಂಘಗಳು ನಮ್ಮ ಯೋಜನೆಯಡಿ ಮುಖಾಂತರ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬಂದಿದೆ ಎಂದರು.
ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಪದವಿ ಓದುವ ವಿದ್ಯಾರ್ಥಿಗಳಿಗೆ ೧೦ ಸಾವಿರ ಲ್ಯಾಪ್‌ಟಾಪ್‌ಗಳನ್ನು ಕಡಿಮೆ ದರದಲ್ಲಿ ವಿತರಿಸಲಾಗಿದೆ. ಜತೆಗೆ ಜಿಲ್ಲೆಯಲ್ಲಿ ೬೦೦ ಜನರಿಗೆ ಪ್ರತಿ ತಿಂಗಳು ಮಾಸಾಶನವನ್ನು ಪೂಜ್ಯರು ನೀಡುತ್ತಿದ್ದಾರೆ. ಬಡ ಕುಟುಂಬಗಳಿಗೆ ಈ ಯೋಜನೆಯ ಮುಖಾಂತರ ಆರ್ಥಿಕವಾಗಿ ಮುಂದೆ ಬರಲು ಧರ್ಮಸ್ಥಳ ಸಂಸ್ಥೆ ಸಹಕಾರಿಯಾಗಿದೆ ಎಂದರು.
ಪ್ರತಿ ಜಿಲ್ಲೆ ತಾಲ್ಲೂಕುಗಳಲ್ಲಿ ಸಮುದಾಯ ಭವನ ಹಾಗೂ ದೇವಸ್ಥಾನಗಳ ನಿಮಾಣಕ್ಕಾಗಿ ಹಾಗೂ ರಂಗಮಂದಿರ ನಿರ್ಮಾಣಕ್ಕಾಗಿ ಪೂಜ್ಯರು ಅನುದಾನ ಕೊಡುತ್ತಿದ್ದಾರೆ. ಈ ಎಲ್ಲ ಯೋಜನೆಗಳು ನಮ್ಮ ಸಂಸ್ಥೆಯನ್ನು ಸಿಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಹರೀಶ್, ವಲಯ ಮೇಲ್ವಿಚಾರಕ ವಿಶ್ವನಾಥ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎನ್.ಭೀಮಶೆಟ್ಟಿ, ಒಕ್ಕೂಟದ ಅಧ್ಯಕ್ಷ ಮಹಾದೇವಯ್ಯ, ಸೇವಾ ಪ್ರತಿನಿಧಿ ಶಿವರತ್ನ ಮತ್ತಿತರರು ಭಾಗವಹಿಸಿದ್ದರು.