ಧರ್ಮಸ್ಥಳ ಸಂಸ್ಥೆ ಕಾರ್ಯಗಳಿಗೆ ಇತರೆ ಸಂಘಗಳ ಸಹಕಾರ ಮುಖ್ಯ

ಮಧುಗಿರಿ, ಜು. ೨೭- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಸಂಘ ಸಂಸ್ಥೆಗಳ ಸಹಕಾರ ಸದಾ ಇರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ತಿಳಿಸಿದರು.
ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ನಡೆದ ಸಾಧನಾ ಸಮಾವೇಶ ವೇದಿಕೆ ಕಾರ್ಯಕ್ರಮ, ಊಟ ಉಪಚಾರ ಮತ್ತು ಪೂಜ್ಯರ ಮೆರವಣಿಗೆ ಶಿಸ್ತುಬದ್ಧವಾಗಿ ನಡೆದಿದ್ದು, ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿ ಬಂತು. ಈ ಬಗ್ಗೆ ಡಾ. ವೀರೇಂದ್ರಹೆಗಡೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸಾಧನಾ ಸಮಾವೇಶ ಕಾರ್ಯಕ್ರಮವು ತಾಲ್ಲೂಕಿನ ಜನತೆಯ ಹಾಗೂ ಪೂಜ್ಯರ ನೆನಪಿನಲ್ಲಿ ಉಳಿಯುವಂತಹ ಅವಿಸ್ಮರಣೀಯವಾಗಿ ಕಾರ್ಯಕ್ರಮವಾಗಿದೆ ಎಂದರು.
ಪುರಸಭಾ ಸದಸ್ಯ ಲಾಲಾ ಪೇಟೆ ಮಂಜುನಾಥ್ ಮಾತನಾಡಿ, ಸಾಧನಾ ಸಮಾವೇಶ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಕಾರ್ಯಕರ್ತರ ಸೌಜನ್ಯ, ಸಂಸ್ಕಾರಯುತ ನಡವಳಿಕೆ ಕಾರಣವಾಗಿದೆ. ಬಡವರ ಪಾಲಿಗೆ ಯೋಜನೆಯು ಕಾಮಧೇನುವಾಗಿದ್ದು, ಸಾಲ ಪಡೆದ ಕುಟುಂಬಗಳು ಹೈನುಗಾರಿಕೆ, ಗುಡಿ ಕೈಗಾರಿಕೆಗಳ ಮೂಲಕ ಆರ್ಥಿಕ ಸದೃಢತೆ ಹೊಂದಿದೆ ಎಂದರು.
ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಯೋಜನೆಯ ಮದ್ಯವರ್ಜನ ಶಿಬಿರದಿಂದ ತಾಲ್ಲೂಕಿನ ಅನೇಕ ಕುಟುಂಬಗಳು ಇಂದು ಸಂತೋಷವಾಗಿ ಜೀವನ ನಡೆಸುತ್ತಿವೆ. ಬರಗಾಲ ಪ್ರದೇಶವಾದ ಈ ಭಾಗದಲ್ಲಿ ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದ ಅನೇಕ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತುಂಗೋಟಿ ರಾಮಣ್ಣ, ಮಹಾತ್ಮ ಗಾಂಧಿ ವಿದ್ಯಾಸಂಸ್ಥೆ ಖಜಾಂಚಿ ಎಂ.ಎಸ್. ಶಂಕರನಾರಾಯಣ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಟಿ.ಸಿ.ಮಂಜುನಾಥ್, ಪುರಸಭೆ ಸದಸ್ಯರಾದ ಕೆ.ನಾರಾಯಣ್, ಮಂಜುನಾಥ ಆಚಾರ್, ಜೆ ನರಸಿಂಹಮೂರ್ತಿ, ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಣ್ಯರನ್ನು ಹಾಗೂ ದಾನಿಗಳನ್ನು ಅಭಿನಂದಿಸಲಾಯಿತು.