ಧರ್ಮಸ್ಥಳ ಸಂಸ್ಥೆಯ ಸೌಲಭ್ಯ ಸದುಪಯೋಗ: ವಿದ್ಯಾರ್ಥಿಗಳಿಗೆ ಕರೆ

ಕುಣಿಗಲ್, ನ. ೧೧- ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೌಲಭ್ಯಗಳನ್ನು ವಿತರಿಸುತ್ತಿದ್ದು, ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವಂತೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ರಮಣ ಬ್ಲಾಕ್‌ನಲ್ಲಿರುವ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ಜಾಲತಾಣ ಎಂಬ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿ ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಳೆದ ೮ ತಿಂಗಳಿನಿಂದ ಕೊರೊನಾ ಸೋಂಕಿನ ಕಾರಣ ಶಾಲೆಗಳು ಪ್ರಾರಂಭಗೊಳ್ಳದೆ ಶೈಕ್ಷಣಿಕವಾಗಿ ತೊಂದರೆಯಾಗಿದ್ದು ಅವರುಗಳು ತಮ್ಮ ತಮ್ಮ ಹೊಲ, ಗದ್ದೆಗಳಲ್ಲಿ ಹಾಗೂ ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆಯು ಇಂತಹ ಯೋಜನೆಗಳ ಮೂಲಕ ಸಹಾಯ ಹಸ್ತ ನೀಡುತ್ತಿರುವ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಿದರು.
ತಾಲ್ಲೂಕಿನಲ್ಲಿ ೧೯೮ ಶಿಕ್ಷಕರ ಹುದ್ದೆ ಖಾಲಿ ಇದ್ದು ಧರ್ಮಸ್ಥಳ ಸಂಸ್ಥೆಯು ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿದ್ದು ಇಲ್ಲಿಯೂ ಮುಂದೆ ಬಂದು ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂದು ಮನವಿ ಮಾಡಿದ ಅವರು, ಶಾಲಾ ಕಟ್ಟಡ ರಂಗಮಂದಿರ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ವೃತ್ತ ನಿರೀಕ್ಷಕ ನಿರಂಜನ್‌ಕುಮಾರ್ ವಿಕಲ ಚೇತನರಿಗೆ ವೀಲ್‌ಚೇರ್ ವಿತರಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಪೂಜ್ಯ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘಗಳನ್ನು ತೆರೆಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಅನೇಕ ಜನಪರ ಸಾಮಾಜಿಕ ಯೋಜನೆಗಳನ್ನು ಜಾರಿಗೆ ತಂದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಸ್ಥೆಯು ಯಾವುದೇ ಕಳಂಕ ಇಲ್ಲದೇ ಉತ್ತಮ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದರು.
ತಾಲ್ಲೂಕು ಯೋಜನಾಧಿಕಾರಿ ಮೋಹನ್‌ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ, ೧೯೮೨ ರಲ್ಲಿ ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯನ್ನು ಆರಂಭಿಸಿದ್ದು ಇಂದು ರಾಜ್ಯಾದ್ಯಂತ ೪೦ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟ್ಯಾಬ್ ವಿಕಲಚೇತನರಿಗೆ ವೀಲ್‌ಚೇರ್, ಹಾಲು ಸಹಕಾರ ಸಂಘಕ್ಕೆ ೪೬ ಸಾವಿರ ರೂ. ೮೪ ಮಂದಿಗೆ ಮಾಸಾಶನ, ೬೬,೨೫೦ ರೂಪಾಯಿ, ೩ ದೇವಸ್ಥಾನಗಳಿಗೆ ೫೫ ಸಾವಿರ ರೂ. ನೀಡಲಾಯಿತು. ಈ ವರ್ಷ ಅಮೃತೂರು ಹೋಬಳಿಯ ೧ ಕೆರೆಯ ಅಭಿವೃದ್ಧಿ ಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಜಿಲ್ಲಾ ಸಮನ್ವಯಾಧಿಕಾರಿ ಮಾಧವ್‌ಗೌಡ, ಜಿಲ್ಲಾ ಜನ ಜಾಗೃತಿ ಸದಸ್ಯ ಕೆ. ಎ. ರವೀಂದ್ರಕುಮಾರ್, ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಕಚೇರಿ ವ್ಯವಸ್ಥಾಪಕಿ ಪೂರ್ಣಿಮಾ, ವಲಯ ಮೇಲ್ವಿಚಾರಕರಾದ ಧನಂಜಯ, ಸೋಹನ್, ರಮ್ಯಾ, ಲೀಲಾವತಿ, ನೇತ್ರಾವತಿ, ನಾಗಭೂಷಣ್ ಸೇರಿದಂತೆ ಒಕ್ಕೂಟದ ಪ್ರತಿನಿಧಿಗಳು ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.