ಧರ್ಮಸ್ಥಳ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಲೋಕಮನ್ನಣೆಗೆ ಪಾತ್ರ: ವಿಶ್ವಾರಾಧ್ಯ ಶ್ರೀ

ಅಫಜಲಪುರ:ಡಿ.25: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಕಾರ್ಯಗಳು ಲೋಕಮನ್ನಣೆಗೆ ಪಾತ್ರವಾಗಿವೆ ಎಂದು ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ದುಧನಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಡಿ.24 ರಿಂದ ಡಿ.31 ರವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ 1777 ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಕುಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಶಿಬಿರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಲಬುರಗಿ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ ಅವರು ಮಾತನಾಡುತ್ತಾ, ಕಳೆದ 41 ವರ್ಷಗಳಿಂದ ನಿರಂತರವಾಗಿ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ರಾಜ್ಯಾದ್ಯಂತ 1776 ಸಮುದಾಯ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಿ 1 ಲಕ್ಷ 30 ಸಾವಿರಕ್ಕೂ ಅಧಿಕ ಜನ ಶಿಬಿರಾರ್ಥಿಗಳಿಗೆ ನವಜೀವನಕ್ಕೆ ಒಳಪಡಿಸಲಾಗಿದೆ. ಹಾಗೂ ಶಿಬಿರದಿಂದ ಮನಸ್ಸು ಪರಿವರ್ತನೆ ಮಾಡಿಕೊಂಡ ಲಕ್ಷಾಂತರ ಜನ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುತ್ತಿರುವುದು ಮದ್ಯವರ್ಜನ ಶಿಬಿರದ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಸಮಾರಂಭ ಉದ್ದೇಶಿಸಿ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ನಾಗೇಂದ್ರ, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಎನ್ ಬಾಬಳಗಾಂವ, ಹಿರಿಯ ಮುಖಂಡ ಸಂಗ್ರಾಮಗೌಡ ಪಾಟೀಲ ಮಾತನಾಡಿದರು.
ಜನಜಾಗೃತಿ ವಿಭಾಗ ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ರಾಜೇಶ ಕೆ. ಪ್ರಾಸ್ತಾವಿಕ ಮಾತನಾಡಿದರು. ಕ್ರೈಂ ಪಿ.ಎಸ್.ಐ ಸಿದ್ದೇಶ್ವರ ಗೇರಡೆ ಸಮಾರಂಭ ಉದ್ಘಾಟಿಸಿದರು. ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಂತೋಷ ದಾಮಾ ಅಧ್ಯಕ್ಷತೆ ವಹಿಸಿಕೊಂಡರು. ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಸ್ವಾಗತಿಸಿದರು. ಮುಖ್ಯ ಅತಿಥಿ ಸ್ಥಾನವನ್ನು ಉಪ ತಹಸೀಲ್ದಾರ ಬಸವರಾಜ ಕರಜಗಿ ವಹಿಸಿಕೊಂಡರು.

ಈ ವೇಳೆ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ, ಆರೋಗ್ಯ ಸಹಾಯಕಿ ರಂಜಿತಾ ಸೇರಿದಂತೆ ನೂರಾರು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಕಲಬುರಗಿ ಜಿಲ್ಲೆಯಲ್ಲೂ ಕಳೆದ 1 ವರ್ಷದಿಂದ ಜಿಲ್ಲೆಯಲ್ಲಿ 8 ಹಾಘೂ ಅಫಜಲಪುರ ತಾಲೂಕಿನಲ್ಲಿ 2 ಮದ್ಯವರ್ಜನ ಶಿಬಿರವನ್ನು ಮಾಡಿ 450 ಅಧಿಕ ಶಿಬಿರಾರ್ಥಿಗಳಿಗೆ ನವಜೀವನಕ್ಕೆ ದಾರಿ ಮಾಡಿಕೊಡಲಾಗಿದೆ. ಈ ಶಿಬಿರದಲ್ಲಿ ಯೋಗ, ಧ್ಯಾನ, ಭಜನೆ, ಗಣ್ಯರಿಂದ ಮಾಹಿತಿ ದರ್ಶನ, ಸ್ವಾಮೀಜಿಯವರಿಂದ ಆಶೀರ್ವಚನ, ಹಿಂದಿನ ನವಜೀವನ ಸಮಿತಿಗಳಿಂದ ಅನಿಸಿಕೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಮನಃ ಪರಿವರ್ತನೆ ಮಾಡಿಸುವ ಕೆಲಸ ಈ ಶಿಬಿರದಲ್ಲಿ ನಡೆಯುತ್ತದೆ.
· ಸತೀಶ ಸುವರ್ಣ ಜಿಲ್ಲಾ ನಿರ್ದೇಶಕರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಲಬುರಗಿ.