ಧರ್ಮಸ್ಥಳ ಸಂಸ್ಥೆಯ ಕಾರ್ಯ ಧರ್ಮದಿಂದ ಕೂಡಿದ್ದು: ಜ್ಯೋತಿರ್ಮಯಾನಂದ ಶ್ರೀ

ಬೀದರ:ಜೂ.10: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಧರ್ಮಯುತವಾಗಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧಿಪತಿ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜಿ ನುಡಿದರು.

ಇಂದು ನಗರದ ಎಸ್.ಆರ್.ಎಸ್ ಫಂಕ್ಷನ್ ಹಾಲ ಅವರಣದ ಮುಂಭಾಗದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಜಿಲ್ಲೆಯ ಪತ್ರಕರ್ತರಿಗೆ ಆಹಾರ ದಿನಸಿ ಸಾಮಗ್ರಿಗಳುಳ್ಳ ಕಿಟ್ ವಿತರಿಸಿ ಮಾತನಾಡಿದರು.

ದಾನದಲ್ಲಿ ಧರ್ಮ ಅಡಗಿದೆ. ಹಾಗಾಗಿಯೇ ವ್ಯಕ್ತಿಯ ಮನಸ್ಸು, ತತ್ವ ಹಾಗೂ ಬುದ್ದಿ ಇವು ಧರ್ಮದ ಅಡಿಪಾಯದಲ್ಲಿ ನಡೆಯಲು ಅಧ್ಯಾತ್ಮ ಅಗತ್ಯ. ಈ ಕಾರ್ಯ ಧರ್ಮಸ್ಥಳ ಸಂಸ್ಥೆ ಸಂಕಷ್ಟದ ಕಾಲದಲ್ಲಿ ಶೋಷಿತರಿಗೆ ಹಾಗೂ ನಿರ್ಗತಿಕರಿಗೆ ಅನ್ನವನಿತ್ತು ಮೇಲೆತ್ತುವ ಕಾರ್ಯ ಮಾಡುತ್ತಿರುವುದು ಸಮಾಜದ ಇತರೆ ಸ್ಥರಗಳಿಗೆ ಮಾದರಿ ಕಾರ್ಯವಾಗಿದೆ ಎಂದು ಬಣ್ಣಿಸಿದರು.

ಕೋರೊನಾ ಒಂದು ಸಾಂಕ್ರಾಮಿಕ ಪಿಡುಗಾಗಿದ್ದರೂ ಮದವೇರಿದ ಮನುಜನಿಗೆ ಮಮಕಾರ ಕಲಿಸಿದೆ, ಹಳ:ಸಿ ಹೋದ ಪ್ರೇಮವನ್ನು ಸನೀಹ ಮಾಡಿದೆ, ಪರಸ್ಪರ ಪ್ರೀತಿ, ವಾತ್ಸಲ್ಯವನ್ನು ಪುನರೂಜ್ಜೀವನಗೊಳಿಸುವ ಮೂಲಕ ಮಾನವಿಯ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರಚೋದಿಸುತ್ತಿದೆ. ಆದ್ದರಿಂದ ಉಳ್ಳುವವರು ಇಲ್ಲದವರನ್ನು ನಿರಂತರವಾಗಿ ಮೇಲೆತ್ತುವ ಮಹತ್ತರ ಕಾರ್ಯ ಮಾಡಬೇಕೆಂದು ಸ್ವಾಮಿಜಿ ಕರೆ ಕೊಟ್ಟರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಉಮರಬ್ಬಾ ಮಾತನಾಡಿ, ರಾಜ್ಯಾದ್ಯಂತ 10500 ನಿರ್ಗತಿಕರಿಗೆ ಮಾಸಿಕ ತಲಾ ಒಂದು ಸಾವಿರ ರೂಪಾಯಿಯಂತೆ ಒಟ್ಟು 12 ಕೋಟಿ ಹಣ ಖರ್ಚು ಮಾಡಲಾಗಿದೆ. ಸುಮಾರು ಒಂದು ಕೋಟಿ ಮೌಲ್ಯದ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ 100 ಟನ್ ಆಕ್ಷಿಜನ್, 350 ಕೋಟಿ ವೆಚ್ಚದಲ್ಲಿ ಆಕ್ಷಿಜನ್ ಹೈಹರ್ ಮಷಿನ್‍ಗಳು ವಿತರಣೆ, ಜಿಲ್ಲಾಸ್ಪತ್ರೆಗೆ 5 ಟನ್ ಆಕ್ಷಿಜನ್ ಪುರೈಕೆ, ಇಲ್ಲಿಯ ನಿರ್ಗತಿಕರು, ಬಡವರು, ಪತ್ರಕರ್ತರು ಸೇರಿದಂತೆ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದ 2 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಪತ್ರಕರ್ತರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದರೂ ಯಾರೋಬ್ಬ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಸಹಾಯಕ್ಕೆ ಬರಲಿಲ್ಲ. ಆದರೆ, ಧರ್ಮಸ್ಥಳದವರು ಸ್ವತಃ ಕಾಲ್ ಮಾಡಿ ಪತ್ರಕರ್ತರ ನೆರವಿಗೆ ಧಾವಿಸಿರುವುದು ಮಾನವಿಯ ಬೆಳವಣಿಗೆ ಎಂದು ಸ್ಮರಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಧರಂಪೂರ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸೇರಿದಂತೆ ಜಿಲ್ಲೆಯ ಪತ್ರಕರ್ತರು, ಸಿಬ್ಬಂದಿಗಳು, ಪತ್ರಿಕಾ ವಿತರಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.