ಧರ್ಮಸ್ಥಳ ಸಂಸ್ಥೆಯಿಂದ ಸುಜ್ಞಾನನಿಧಿ ಶಿಷ್ಯವೇತನ ವಿತರಣೆ

ಅಫಜಲಪುರ:ಜೂ.21: ತಾಲೂಕಿನಲ್ಲಿ 24 ವಿದ್ಯಾರ್ಥಿಗಳಿಗೆ ಮಂಜೂರಾಗಿರುವ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ಪೂಜ್ಯ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ವಿತರಿಸಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯ ಹಲವು ಜನಪರ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ ಯೋಜನೆಯಲ್ಲಿ ಹಲವು ಕಾರ್ಯಕ್ರಮಗಳಿದ್ದು, ಅದರಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಪ್ರಸ್ತುತ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪರಿಸರ ಜಾಗೃತಿಯ ವಿಷಯವಾಗಿ ಬಿಸಿಲು ನಾಡಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಗಿಡ ನೆಡುವುದರ ಮೂಲಕ ಪರಿಸರ ಉಳಿಸಿ ಬೆಳೆಸುವಂತೆ ಕರೆ ನೀಡಿದರು.

ಈ ವೇಳೆ ತಾಲೂಕಾ ಯೋಜನಾಧಿಕಾರಿ ಶಿವರಾಜ ಆಚಾರ್ಯ, ಜನಜಾಗೃತಿ ಯೋಜನಾಧಿಕಾರಿ ರಾಜೇಶ, ಪುರಸಭೆ ಸದಸ್ಯ ಚಂದು ದೇಸಾಯಿ, ಚಂದ್ರಶೇಖರ ಕರಜಗಿ ಸೇರಿದಂತೆ ಸಹ ಶಿಕ್ಷಕರು, ಪಾಲಕರು ಹಾಗೂ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.