ಧರ್ಮಸ್ಥಳ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ನೆರವು


ಹರಿಹರ.ನ.೨೫; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ಗಣಪತಿ ಮಾಳಂಜಿ ಹೇಳಿದರು. ತಾಲೂಕಿನ ಕೊಂಡಜ್ಜಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ಮಕ್ಕಳಿಗೆ ಉಚಿತ ತರಗತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಧರ್ಮಸ್ಥಳ ಸಂಸ್ಥೆ ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ, ತಾಂತ್ರಿಕ ಶಿಕ್ಷಣಕ್ಕೆ ಸ್ಕಾಲರ್‌ಶಿಪ್, ಅಗತ್ಯ ಶಾಲಾ ಕಟ್ಟಡ, ಕಾಂಪೌಂಡ್ ರಚನೆಗೆ ಅನುದಾನ, ಪೀಠೋಪಕರಣ ಒದಗಣೆ, ಮಕ್ಕಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಪರಿಸರ ಮಾಹಿತಿ ಕಾರ್ಯಕ್ರಮ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು. ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ಶೈಕ್ಷಣಿಕ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆ ನೀಡುತ್ತಿದ್ದಾರೆ, ಲಾಕ್ ಡೌನ್ ಹಾಗೂ ಇತರೆ ಕಾರಣಗಳಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಹರಿಹರ ತಾಲೂಕಿನಲ್ಲಿ ಐದು ಶಾಲೆಗಳಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಉಚಿತ ಟ್ಯೂಷನ್ ತರಗತಿ ಆರಂಭಿಸಿದ್ದು, ಮಕ್ಕಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಮುಖ್ಯೋಪದ್ಯಾಯರಾದ ಚನ್ನಪ್ಪಗೌಡ ಪಾಟೀಲ್ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಶ್ಲಾಘನೀಯವಾದದ್ದು. ನಮ್ಮ ಶಾಲೆಯ 60 ಮಕ್ಕಳಿಗೆ ಈ ಯೋಜನೆಯಲ್ಲಿ ವಾರದ ಐದು ದಿನ ಶಾಲಾ ತರಗತಿ ಸಮಯ ಹೊರತುಪಡಿಸಿ ಸಂಜೆ 4.00 ರಿಂದ 5.00 ಘಂಟೆ ವರೆಗೆ ಟ್ಯೂಷನ್ ತರಗತಿ ಮಾಡಲಾಗುತ್ತದೆ ಎಂದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಹಿಂದಿ ಶಿಕ್ಷಕ ಕಿರಣ್ ಕುಮಾರ್, ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ರಾಜಶೇಖರ್ ಕೊಂಡಜ್ಜಿ, ಒಕ್ಕೂಟ ಅಧ್ಯಕ್ಷ ಪ್ರಕಾಶ್ ಕೊಂಡಜ್ಜಿ, ಶಾಲೆಯ ಸಹ ಶಿಕ್ಷಕರು, ವಲಯ ಮೇಲ್ವಿಚಾರಕ ಹಾಗೂ ಸೇವಾ ಪ್ರತಿನಿಧಿಗಳಿದ್ದರು.