ಧರ್ಮಸ್ಥಳ ಸಂಸ್ಥೆಯಿಂದ ಉಚಿತ ವಾಹನಸೇವೆ

ಹರಿಹರ.ಮೇ.೫: ಗ್ರಾಮೀಣ ಭಾಗದ ಕೊರೊನಾ ಶಂಕಿತ, ಸೋಂಕಿತರನ್ನು ನಗರ ಪ್ರದೇಶದ ಆಸ್ಪತ್ರೆಗೆ ಸಾಗಿಸಲು ಧರ್ಮಸ್ಥಳ ಸಂಸ್ಥೆಯಿಂದ ರಾಜ್ಯದ್ಯಾಂತ 350 ವಾಹನಗಳ ಉಚಿತ ಸೇವೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ತಾಲೂಕು ಸಂಯೋಜಕ ಗಣಪತಿ ಮಾಳಂಜಿ ಹೇಳಿದರು. ತಾಲೂಕಿಗೆ ಬಿಡುಗಡೆಯಾದ ಎರಡು ವಾಹನಗಳನ್ನು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಂದ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇದು ಸಂಕಷ್ಟದ ಸಮಯ. ದುಡಿಮೆ ಇಲ್ಲದೆ ಗ್ರಾಮೀಣ ಭಾಗದ ಕೂಲಿಕಾರರು ಸೋಂಕಿತರಾದರೆ ನಗರದ ಆಸ್ಪತ್ರೆಗಳಿಗೆ ಬಂದು ಹೋಗಲು ವಾಹನ ವ್ಯವಸ್ಥೆ ಮಾಡುವುದು ದುಸ್ತರವಾಗಿರುತ್ತದೆ.ಇದನ್ನರಿತು ಸಂಸ್ಥೆಯ ಮುಖ್ಯಸ್ಥರಾದ ಡಾ.ವೀರೇಂದ್ರ ಹೆಗ್ಗಡೆಯವರು 350 ಉಚಿತ ವಾಹನ ಸೇವೆಯನ್ನು ಆರಂಭಿಸಿದ್ದಾರೆ. ತಾಲೂಕಿಗೆ ಎರಡು ವಾಹನಗಳು ಬಂದಿವೆ. ಮೇ 15ರವರೆಗೆ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ವಾಹನ ಲಭ್ಯವಿರುತ್ತವೆ.ಗ್ರಾಮೀಣ ಭಾಗದಲ್ಲಿರುವ ಸಂಸ್ಥೆಯ ಸೇವಾಪ್ರತಿನಿಧಿ, ಮೇಲ್ವಿಚಾರಕರು ಅಥವಾ ಯೋಜನಾಧಿಕಾರಿಯನ್ನು ಸಂಪರ್ಕಿಸಿ ಅಗತ್ಯ ಇರುವವರು ಸೇವೆ ಪಡೆಯಬಹುದಾಗಿದೆ. ಮೊದಲು ಬಂದವರಿಗೆ ಆಧ್ಯತೆ ಆಧಾರದ ಮೇಲೆ ಸೇವೆ ಲಭ್ಯವಿದೆ. ಇದಕ್ಕಾಗಿ ಯಾರಿಗೂ ಯಾವ ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿಲ್ಲ. ಈ ವಾಹನಗಳಲ್ಲಿ ಆಮ್ಲಜನಕ ಇತರೆ ವೈದ್ಯಕೀಯ ಸೌಲಭ್ಯಗಳಿರುವುದಿಲ್ಲ ಎಂದರು.ಲೋಕಾರ್ಪಣೆ ಮಾಡಿದ ತಹಸೀಲ್ದಾರ್, ಪ್ರೊಬೇಷನರಿ ಎಸಿ ವೀರೇಶ್, ಟಿಎಚ್‌ಒ ಡಾ.ಚಂದ್ರಮೋಹನ್ ಮಾತನಾಡಿ, ಗ್ರಾಮೀಣ ಭಾಗದವರಿಗೆ ಅಗತ್ಯವಾಗಿದ್ದ ವಾಹನ ಸೇವೆಯನ್ನು ಉಚಿತವಾಗಿ ಒದಗಿಸುತ್ತಿರುವುದು ಈ ಸಂಸ್ಥೆಯ ಸೇವಾ ಗುಣಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಕೋರಿದರು.ಸಂಸ್ಥೆಯ ಪ್ರಬಂಧಕ ಮೋಹನ್, ಸಹಾಯಕರಾದ ಹನುಮಂತ, ಮಂಜುನಾಥ್, ಗ್ರಾಮಲೆಕ್ಕಾಧಿಕಾರಿ ಹೇಮಂತ್ ಕುಮಾರ್ ಎಚ್.ಜಿ., ವಾಹನ ಚಾಲಕರಿದ್ದರು.