ಧರ್ಮಸ್ಥಳ ಯೋಜನೆ ಕಾರ್ಯ ಶ್ಲಾಘನೀಯ

ದೇವದುರ್ಗ.ನ.೧೨- ಕೋವಿಡ್ ೧೯ ವೈರಸ್‌ನಿಂದ ಶಾಲೆಗಳು ಆರಂಭವಾಗದ ಕಾರಣ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ಅರ್ಥಮಾಡಿಕೊಂಡ ಶ್ರೀಕ್ಷೆತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಾಪಂ ಅಧ್ಯಕ್ಷ ಹನುಮಂತ ಮಿಯ್ಯಾಪುರ ಹೇಳಿದರು.
ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯೋಜಿಸಿದ್ದ ಜ್ಞಾನತಾಣ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಟ್ಯಾಬ್, ಲ್ಯಾಪ್‌ಟಾಪ್ ವಿತರಿಸಿ ಸೋಮವಾರ ಮಾತನಾಡಿದರು. ಧರ್ಮಸ್ಥಳ ಪೂಜ್ಯರ ಅಭಿಲಾಷೆಯಂತೆ ಬಡ ವಿದ್ಯಾರ್ಥಿಗಳಿಗೆ ಜ್ಞಾನತಾಣ ಕಾರ್ಯಕ್ರಮ ಉಪಯುಕ್ತವಾಗಿದೆ. ಮಕ್ಕಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ವಿತರಣೆ ಮಾಡುವ ಮೂಲಕ ಶೈಕ್ಷಣಿಕ ಬೆಳವಣಿಗೆ ಯೋಜನೆ ಶ್ರಮಿಸುತ್ತಿದೆ ಎಂದು ಹೇಳಿದರು.
ಯೋಜನಾಧಿಕಾರಿ ಮಯೂರ್ ಎನ್.ತೋರಸ್ಕರ್ ಮಾತನಾಡಿ, ಜ್ಞಾನತಾಣ ಕಾರ್ಯಕ್ರಮದಡಿ ರಾಜ್ಯಾದ್ಯಂತ ೨೦ಸಾವಿರ ಟ್ಯಾಬ್, ೧೦ಸಾವಿರ ಲ್ಯಾಪ್‌ಟಾಪ್ ವಿತರಿಸುವ ಯೋಜನೆಯಿದೆ. ಆರಂಭಿವಾಗಿ ೧೦೦ಟ್ಯಾಬ್, ೫೦ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ. ಮಕ್ಕಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಅಭ್ಯಾಸ ಮಾಡಬೇಕು ಎಂದರು.
ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಸುರೇಶ ಪಾಟೀಲ್, ಶರಣು ಹುಣಸಿಗಿ, ಬಂದೆನವಾಜ್ ನಾಗಡದಿನ್ನಿ, ಶಂಕ್ರಪ್ಪ ಅರಗೋಳ ಹಾಗೂ ನಾಗಡದಿನ್ನಿ ಸ್ವಸಹಾಯ ಸಂಘದ ಸದಸ್ಯರು ಇದ್ದರು.