ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೋವಿಡ್ ಕೇರ್ ಸೆಂಟರ್‌ಗಳ ಸ್ಥಾಪನೆ

ಉಜಿರೆ, ಎ.೫- ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರಗಳನ್ನು ಕೋವಿಡ್ ಕೆರ್ ಸೆಂಟರ್‌ಗಳನ್ನಾಗಿ ಪರಿವರ್ತಿಸಲು ಸಂಸ್ಥೆಯ ಅಧ್ಯಕ್ಷ ಡಾ| ವೀರೇಂದ್ರ ಹೆಗ್ಗಡೆಯವರು ಆದೇಶಿಸಿರುತ್ತಾರೆ.
ಈ ನಿಟ್ಟಿನಲ್ಲಿ ಉಜಿರೆಯಲ್ಲಿರುವ ಜನಜಾಗೃತಿ ಮದ್ಯಮುಕ್ತ ಸಂಶೋಧನಾ ಕೇಂದ್ರ, ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರು, ಜ್ಞಾನವಿಕಾಸ ತರಬೇತಿ ಕೇಂದ್ರ ಧಾರವಾಡ ಈ ಕೇಂದ್ರಗಳನ್ನು ಕೋವಿಡ್ ಪೀಡಿತರ ಚಿಕಿತ್ಸೆ ಮತ್ತು ಐಸೋಲೇಶನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಹಂತದಲ್ಲಿ ಈ ಮೂರು ಕೇಂದ್ರಗಳಲ್ಲಿ ೧೭೫ ರೋಗಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅಗತ್ಯ ಬಿದ್ದರೆ ತತ್‌ಕ್ಷಣದಲ್ಲಿ ೮೦೦ ರೋಗಿಗಳಿಗೆ ವ್ಯವಸ್ಥೆ ಒದಗಿಸುವ ಅವಕಾಶವನ್ನು ಕಾದಿರಿಸಲಾಗಿದೆ.
ಪ್ರತಿಯೊಂದು ಕೇಂದ್ರದಲ್ಲಿಯೂ ರೋಗ ಪರೀಕ್ಷೆಗೆ ಬೇಕಾಗುವ ಪ್ರಾಥಮಿಕ ಉಪಕರಣಗಳು, ಉಚಿತ ವಸತಿ ಮತ್ತು ಊಟದ ವ್ಯವಸ್ಥೆ, ಮತ್ತು ಆಕಸ್ಮಾತ್ ರೋಗ ಉಲ್ಭಣವಾದರೆ ಹೆಚ್ಚಿನ ಚಿಕಿತ್ಸೆ ಪಡಕೊಳ್ಳಲು ಆಸ್ಪತ್ರೆಗೆ ತೆರಳಲು ಬೇಕಾಗುವ ವಾಹನ ವ್ಯವಸ್ಥೆಯನ್ನು ಇಟ್ಟುಕೊಳ್ಳಲಾಗಿದೆ. ಜನಜಾಗೃತಿ ಕೇಂದ್ರದಿಂದ ಪ್ರತಿಯೊಂದು ಕೇಂದ್ರಕ್ಕೆ ಇಬ್ಬರಂತೆ ನರ್ಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆ ಪಡೆಯುವವರಿಗೆ ಹೆಚಿನ ಆಸ್ಪತ್ರೆ ಬೇಕಾದಲ್ಲಿ ಬೇರೆ ಆಸ್ಪತ್ರೆಗೆ ತೆರಳಲು ಅನುಕೂಲವಾಗುವಂತೆ ಆಸ್ಪತ್ರೆಗಳೊಡನೆ ಚರ್ಚಿಸಿ ವ್ಯವಸ್ಥೆ ಮಾಡಲಾಗಿದೆ.
ಅಗತ್ಯ ಬಿದ್ದಲ್ಲಿ ಬೆಳ್ತಂಗಡಿಯ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಮತ್ತು ಉಡುಪಿಯಲ್ಲಿರುವ ರಾಷ್ಟ್ರೀಯ ಸ್ವಸಹಾಯ ತರಬೇತಿ ಕೇಂದ್ರವನ್ನು ಕೊವಿಡ್ ಚಿಕಿತ್ಸೆಗೆ ಒದಗಿಸಲು ಸಿದ್ಧತೆಯನ್ನು ಮಾಡಲಾಗಿದೆ. ಈ ಕೇಂದ್ರಗಳು ಸೇರಿದಲ್ಲಿ ಸುಮಾರು ೮೦೦ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸಲು ಸಾಧ್ಯವಾಗಬಹುದು ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ತಿಳಿಸಿರುತ್ತಾರೆ.
ಗೆಳತಿ ಕೇಂದ್ರದಿಂದ ಸೋಂಕಿತರಿಗೆ ಆಪ್ತ ಸಮಾಲೋಚನೆ :
ಯೋಜನೆಯ ವತಿಯಿಂದ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ನಿರ್ದೇಶನದಂತೆ ಬೆಳ್ತಂಗಡಿಯಲ್ಲಿ ನಡೆಸಲಾಗುತ್ತಿರುವ ಗೆಳತಿ ಕೌಟುಂಬಿಕ ಸಲಹಾ ಕೇಂದ್ರದಿಂದ ಕೋವಿಡ್ ಸೋಂಕಿತರಿಗೆ ಆಪ್ತ ಸಮಾಲೋಚನೆಯನ್ನು ನೀಡುವ ಕಾರ್ಯಕ್ರಮವನ್ನು ಪುನರ್ ಪ್ರಾರಂಭಿಸಲಾಗುತ್ತಿದೆ. ೨೦೨೦ ರಲ್ಲಿ ಕೋವಿಡ್ ರೋಗದ ಪ್ರಥಮ ಅಲೆಯಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸೋಂಕಿತರಿಗೆ ದೂರವಾಣಿ ಮುಖೇನ ಆಪ್ತ ಸಮಾಲೋಚನೆಯನ್ನು ನಿರಂತರವಾಗಿ ಕೈಗೊಳ್ಳಲಾಗಿತ್ತು. ಈ ಹಂತದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚಿನ ಸೋಂಕಿತರನ್ನು ಸಂಪರ್ಕಿಸಿ ಯೋಗ ಕ್ಷೇಮ ವಿಚಾರಣೆ, ಮಾನಸಿಕ ಆರೋಗ್ಯ ವಿಶ್ಲೇಷಣೆ, ಆತ್ಮ ಸ್ಥೈರ್ಯ ನಿರ್ಮಾಣ, ಕುಟುಂಬದವರ ಸಹಕಾರ, ವಿಶ್ಲೇಷಣೆ ಕುರಿತಂತೆ ಸಮಾಲೋಚನೆಯನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮವು ನೀಡಿದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಇದೀಗ ಮತ್ತೊಮ್ಮೆ ಆಪ್ತ ಸಮಾಲೋಚನೆಯನ್ನು ಪ್ರಾರಂಭಿಸಲಾಗಿದೆ ಯೋಜನೆಯು ಪ್ರಕಟಣೆಯಲ್ಲಿ ತಿಳಿಸಿರುತ್ತದೆ.