ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯ ಮೆಚ್ಚುವಂತದ್ದು

ಕೆ.ಆರ್.ಪೇಟೆ, ನ.10: ಕೊರೋನಾ ಮಹಾಮಾರಿಯ ಪ್ರವೇಶದಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಕುಂಠಿತವಾಗಿದ್ದು ಇದಕ್ಕಾಗಿಯೇ ಗ್ರಾಮೀಣ ಭಾಗದ ಬಡಜನರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು ನೀಡಲು ಪ್ರಾರಂಭಿಸಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಮೆಚ್ಚಲೇಬೇಕಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು.
ಪಟ್ಟಣದ ಹೋಟೆಲ್ ರಾಮದಾಸ್ ಹೋಟೆಲ್‍ನ ಸುಲೋಚನಮ್ಮ ಪಾರ್ಟಿಹಾಲ್‍ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಆಯೋಜಿಸಲಾಗಿದ್ದ ಜ್ಞಾನತಾಣದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅನ್ನದಾನ ನೀಡುತ್ತಿರುವ ಧರ್ಮಸ್ಥಳ ಸಂಸ್ಥೆ ವಿದ್ಯಾದಾನವನ್ನೂ ನೀಡುವ ಮಹತ್ತರ ಕೆಲಸಕ್ಕೆ ಕೈ ಹಾಕಿದ್ದು ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸಭಲೀಕರಣಕ್ಕಾಗಿ ಗ್ರಾಮಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ರಚಿಸಿ ಗ್ರಾಮೀಣ ಮಹಿಳೆಯರಿಗೆ ಸುಲಭ ಸಾಲದ ವ್ಯವಸ್ಥೆ ಮಾಡಿ ಕೃಷಿ, ಹೈನುಗಾರಿಕೆ ಮುಂತಾದವುಗಳಿಗೆ ಉತ್ತೇಜನ ನೀಡಿ ಗ್ರಾಮೀಣರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿದುತ್ತಿದೆ ಇದಕ್ಕೆ ಅವರಿಗೆ ಅಭಿನಂದನೆಗಳು ಎಂದು ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು.
ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರರೈ ಮಾತನಾಡಿ ಗ್ರಾಮೀಣ ಮಕ್ಕಳ ಕಲಿಕೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಕೋವಿಡ್ ಸಮಸ್ಯೆಯಿಂದ ರಾಜ್ಯದಲ್ಲಿ ಶಾಲೆಗಳನ್ನು ತೆರೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಲಿಕೆಯಿಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಬಾರದೆನ್ನುವ ಕಾರಣದಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಅಭಿಲಾಷೆಯಂತೆ ಅರ್ಹ ಮತ್ತು ಆಸಕ್ತ ಗ್ರಾಮೀಣ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ 10 ನೇ ತರಗತಿಯವರೆಗೆ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತದ ವಾರ್ಷಿಕ ಪಠ್ಯಗಳನ್ನು ಟ್ಯಾಬ್ ಗಳಲ್ಲಿ ಜೋಡಿಸಿ ನೀಡಲಾಗುತ್ತಿದೆಯೆಂದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ರೂಪಿಸಿದ್ದು ಪ್ರಸಕ್ತ ವರ್ಷ ರಾಜ್ಯದ 20 ಸಾವಿರ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಟ್ಯಾಬ್ ನೀಡಲಾಗುತ್ತಿದೆ. ಪದವಿ ಕಾಲೇಜಿನ 10 ಸಾವಿರ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ರಾಜ್ಯದಾದ್ಯಂತ 10 ಸಾವಿರ ಪ್ರತಿಭಾವಂತ ಮಕ್ಕಳಿಗೆ ಧರ್ಮಸ್ಥಳ ಯೋಜನೆಯ ವತಿಯಿಂದ ಸ್ಕಾಲರ್ ಶಿಪ್ ನೀಡಲಾಗುತ್ತಿದೆಯಲ್ಲದೆ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಬೆಂಚು ಮತ್ತಿತರರ ಪರಿಕರಗಳನ್ನು ನೀಡಲಾಗುತ್ತಿದೆ. ಜ್ಞಾನತಾಣ ಕಾರ್ಯಕ್ರಮದ ಮೂಲಕ ರಾಜ್ಯದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಟ್ಯಾಬ್ ಮತ್ತು ಲ್ಯಾಪ್ ಟಾಪ್ ನೀಡಲು ಉದ್ದೇಶಿಸಿದ್ದು ಇದಕ್ಕಾಗಿ ಸಂಸ್ಥೆ 81 ಕೋಟಿ ರೋ ವಿನಿಯೋಗ ಮಾಡುತ್ತಿದೆ ಎಂದು ಗಂಗಾಧರ ರೈ ಹೇಳಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ವೈ.ಎನ್.ಚಂದ್ರಮೌಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು, ಶೀಳನೆರೆ ಅಂ¨ರೀಷ್, ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ಉದ್ಯಮಿ ಹಾಗೂ ಪ್ರಥಮದರ್ಜೆ ಗುತ್ತಿಗೆದಾರ ಅಕ್ಕಿಹೆಬ್ಬಾಳು ರಘು, ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಮುಂತಾದವರು ಹಾಜರಿದ್ದರು.