ಧರ್ಮಸ್ಥಳದ ಸೌಜನ್ಯ ಪ್ರಕರಣ: ಮರು ತನಿಖೆಗೆ ಆಗ್ರಹ

ಕಲಬುರಗಿ,ಜು.26: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ಮರು ತನಿಖೆಯಾಗಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್‍ನ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಯಕ ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸಲು ಕುಟುಂಬಸ್ಥರು, ಸಂಘಟನೆಗಳು ಹೋರಾಟ ಮಾಡುತ್ತಲೇ ಇವೆ. ಇತ್ತೀಚೆಗೆ ಸಿಬಿಐ ನ್ಯಾಯಾಲಯದ ತೀರ್ಪಿನ ಬಳಿಕ ಸಂಘಟನೆಯ ಮಹಿಳಾ ಘಟಕವು ಪ್ರಕರಣದ ಮರು ತನಿಖೆ ಕೈಗೊಂಡು ಆರೋಪಿಗಳಿಗೆ ಕಾನೂನಿನ ಅಡಿ ಶಿಕ್ಷೆ ವಿಧಿಸಲು ಒತ್ತಾಯಿಸಿದೆ ಎಂದರು.
ಕಳೆದ 2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಆ ಕುರಿತು ಹಲವು ಇಲಾಖೆಗಳಿಂದ ತನಿಖೆ ಆಗಿತ್ತು. 2013ರಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2013ರಿಂದ 2023ರವರೆಗೆ ಸಿಬಿಐ ತನಿಖೆ ಮಾಡಿತು. ಇತ್ತೀಚೆಗೆ ಶಂಕಿತ ಆರೋಪಿಯನ್ನು ನ್ಯಾಯಾಲಯ ದೋಷ ಮುಕ್ತಗೊಳಿಸಿತು. ತನಿಖೆಯಲ್ಲಿ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂಬ ನೋವು ಬೆಳ್ತಂಗಡಿ ಜನರಲ್ಲಿ ಮಡುಗಟ್ಟಿದೆ. ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕುಮಾರಿ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಸಂತೋಷ್ ಬಿ. ಪಾಳಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಅನುಸೂಯಾ ಸೋಲೇಕರ್, ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಗಾಯಕವಾಡ್, ಶ್ರೀಮತಿ ಭಾರತಿ ಬಬಲಾದ್, ಶ್ರೀಮತಿ ಗಂಗೂಬಾಯಿ ಮುಂತಾದವರು ಉಪಸ್ಥಿತರಿದ್ದರು.