ಧರ್ಮಸ್ಥಳದವರ ಕೆಲಸ ಪುಣ್ಯದ ಕೆಲಸ: ಶಾಸಕ: ಖಾಶೆಂಪುರ್

ಬೀದರ:ಜೂ.3: ಧರ್ಮಸ್ಥಳ ಪುಣ್ಯ ಕ್ಷೇತ್ರ. ಅದರ ಪೀಠಾಧಿಪತಿಗಳಾದ ವೀರೇಂದ್ರ ಹೆಗಡೆಯವರು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಆಕ್ಸಿಜನ್, ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಣೆ ಸೇರಿದಂತೆ ಹಲವಾರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ನಗರದ ಬ್ರಿಮ್ಸ್ ಆಸ್ಪತ್ರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಕೊಡುಗೆಯಾಗಿ ನೀಡಲಾದ 05 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಕೆರೆ ಹೂಳೆತ್ತುವ ಕಾರ್ಯಕ್ರಮಗಳು, ಸಮುದಾಯ ಭವನಗಳ ಕಟ್ಟಡಗಳ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳಿಗೆ ಸಹಾಯ ಮಾಡುತ್ತಿದ್ದಾರೆ.
ಮಂಜುನಾಥ ಸ್ವಾಮಿಯವರ ಅನುಗ್ರಹ ನಮ್ಮ ಮೇಲೆ ಇರಲಿ ಎಂದು ನಾನು ಹಿಂದೆ ಸಚಿವನಾಗಿದ್ದಾಗ ಹೆಗಡೆಯವರಿಗೆ ಮನವಿ ಮಾಡಿದ್ದೆ. ನಮ್ಮ ಭಾಗಕ್ಕೆ ಬಂದು ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ನಮ್ಮ ಭಾಗದಲ್ಲಿ ಮಾಡುವಂತೆ ಕೋರಿದ್ದೆ. ಈಗ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಡೆಯಿಂದ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ನೀಡಿದ್ದಾರೆ. ಚೌಳಿಯಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವಕರ್ಮ ಸಮಾಜದ ಸಮುಧಾಯ ಭವನಕ್ಕೆ ಐದು ಲಕ್ಷ ರೂ.ಗಳ ಸಹಾಯಧನ ನೀಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಚೌಳಿಯಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವಕರ್ಮ ಸಮಾಜದ ಸಮುದಾಯ ಭವನಕ್ಕೆ ಐದು ಲಕ್ಷ ರೂ.ಗಳ ಸಹಾಯಧನ ನೀಡಿದ ಪತ್ರವನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದರು. ಈ ಭವನಕ್ಕೆ ಶಾಸಕರ ಅನುಧಾನದಲ್ಲಿ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಆಯುಕ್ತರು, ಬ್ರಿಮ್ಸ್ ನ ವೈದ್ಯಾಧಿಕಾರಿಗಳು ಸಿಬ್ಬಂಧಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ಶ್ರೀನಿವಾಸ ಹಾಗೂ ಮುಖಂಡರು, ವಿಶ್ವಕರ್ಮ ಸಮಾಜದ ಮುಖಂಡರು ಸೇರಿದಂತೆ ಅನೇಕರಿದ್ದರು.