ಧರ್ಮಸ್ಥಳದಲ್ಲಿ ನೆರಿಯಾ ನದಿಗೆ ೧೫ ಕೋಟಿ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ

ಉಜಿರೆ, ಮಾ.೩೦- ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಎಂಬಲ್ಲಿ ನೆರಿಯಾ ನದಿಗೆ ೧೫ ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ಮುಂದೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದರೂ ಇಲ್ಲಿಂದ ಅಲ್ಲಿಗೆ ನೀರು ಸರಬರಾಜು ಮಾಡಲಾಗುವುದು. ಧರ್ಮಸ್ಥಳದಲ್ಲಿರುವ ಎಲ್ಲಾ ಓವರ್‌ಹೆಡ್ ಟ್ಯಾಂಕ್‌ಗಳಿಗೂ ನೀರು ತುಂಬಿಸಿ ನೀರಿನ ಸಮಸ್ಯೆ ಬಗೆ ಹರಿಯಲಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ, ಸಣ್ಣ ನೀರಾವರಿ ಇಲಾಖೆ ಹಾಗೂ ಈ ಬಗ್ಗೆ ವಿಶೇಷ ಪ್ರಯತ್ನ ಮಾಡಿದ ಶಾಸಕ ಹರೀಶ್ ಪೂಂಜ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿ ಧರ್ಮಸ್ಥಳದ ಭಕ್ತರು ಹಾಗೂ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವ ಮುಳಿಕ್ಕಾರು ಪ್ರದೇಶಕ್ಕೆ ಸೋಮವಾರ ಶಾಸಕ ಹರೀಶ್ ಪೂಂಜ ಹಾಗೂ ಎಂಜಿನಿಯರ್‌ಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಬಳಿಕ ಹೆಗ್ಗಡೆಯವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಧರ್ಮಸ್ಥಳದ ನೆಲ್ಯಾಡಿ ಬೀಡಿನಿಂದ ಮುಳಿಕ್ಕಾರು ಮೂಲಕ ಉಪ್ಪಿನಂಗಡಿಗೆ ಹೋಗಲು ಕಚ್ಛಾ ವಾಣಿಜ್ಯ ರಸ್ತೆ ಪ್ರಾಚೀನ ಕಾಲದಿಂದಲೂ ಇತ್ತು ಎಂದು ಹೆಗ್ಗಡೆಯವರು ತಿಳಿಸಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಕಳೆದ ವರ್ಷವೇ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ೧೫ ಕೋಟಿ ರೂ. ಮಂಜೂರಾಗಿದ್ದು, ಕೊರೊನಾದಿಂದಾಗಿ ಒಂದು ವರ್ಷ ವಿಳಂಬವಾಗಿ ಕಾಮಗಾರಿ ಆರಂಭವಾಗಿದೆ ಇದೇ ಫೆಬ್ರವರಿ ೧೦ ಕ್ಕೆ ಕಾಮಗಾರಿ ಆರಂಭಿಸಿದ್ದು ಇದೇ ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

ಗುತ್ತಿಗೆದಾ ಅಶೋಕ ಕುಮಾರ್ ನೇತೃತ್ವದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಸೋಮವಾರದಿಂದ ಸೆಂಟ್ರಿಂಗ್ ಆರಂಭಗೊಂಡಿದೆ

ಕಿಂಡಿ ಅಣೆಕಟ್ಟು ೮೬ ಮೀ. ಅಗಲ ಹಾಗೂ ೭ ಮೀ ಎತ್ತರವಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗೋಕುಲ್‌ದಾಸ್ ಮಾಹಿತಿ ನೀಡಿದರು.

ಸಹಾಯಕ ಎಂಜಿನಿರ್‌ಗಳಾದ ವಿಷ್ಣು ಕಾಮತ್, ರಾಕೇಶ್ ಮತ್ತು ಶಿವಪ್ರಸನ್ನ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ವರ್ಷವಿಡೀ ಧರ್ಮಸ್ಥಳಕ್ಕೆ ಬೇಕಾದಷ್ಟು ನೀರು ಇಲ್ಲಿ ಸಂಗ್ರಹಿಸಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.