ಧರ್ಮಸ್ಥಳದಲ್ಲಿ ಕಣ್ಮನ ಸೆಳೆದ ರಾಷ್ಟ್ರೀಯ ನೃತ್ಯೋತ್ಸವ

ಉಜಿರೆ, ಮಾ.೩೧- ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಆಶ್ರಯದಲ್ಲಿ ನೃತ್ಯೋತ್ಸವ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ನಡೆಯಿತು.

ನೃತ್ಯೋತ್ಸವವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ ಕಲೆಗೆ ವಿಶೇಷ ಮಹತ್ವ ಇದೆ. ನೃತ್ಯ ಪಟುಗಳ ಸೇವೆ-ಸಾಧನೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಸೇವೆಯನ್ನು ಶ್ಲಾಘಿಸಿದರು.

ಎಂಟು ವಿಧದ ಶಾಸ್ತ್ರೀಯ ನೃತ್ಯ ಕಲಾವಿದರು ಪ್ರದರ್ಶಿಸಿದ ಆಕರ್ಷಕ ನೃತ್ಯ ಪ್ರೇಕ್ಷಕರ ಮುಕ್ತ ಪ್ರಶಂಸೆಗೆ ಪಾತ್ರವಾಯಿತು. ಜರ್ಮನಿ, ಹೊಸಪೇಟೆ, ಮಡಿಕೇರಿ, ಹಾಸನ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಿಂದ ಬಂದ ನೂರು ಕಲಾವಿದರು ನೃತ್ಯ ಪ್ರದರ್ಶನ ನೀಡಿದರು.

ಶ್ರೀ ಮಂಜುನಾಥ ಸ್ವಾಮಿಗೆ ಸೇವಾ ರೂಪದಲ್ಲಿ ನೃತ್ಯ ಪ್ರದರ್ಶನ ನೀಡಿದ ಎಲ್ಲಾ ಕಲಾವಿದರಿಗೂ ಶ್ರೀ ಮಂಜುನಾಥ ಸ್ವಾಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೂಕ್ತ ಅವಕಾಶ ಸಿಗದ ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದೇ ರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವದ ಉದ್ದೇಶವಾಗಿದೆ ಎಂದು ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಕಾರ್ಯದರ್ಶಿ ಹಾಗೂ ಖ್ಯಾತ ನೃತ್ಯ ಕಲಾವಿದೆ ಡಾ. ಸ್ವಾತಿ ಪಿ. ಭಾರದ್ವಾಜ್ ತಿಳಿಸಿದ್ದಾರೆ.

ಈಗಾಗಲೆ, ದೇಶದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ನೃತ್ಯೋತ್ಸವ ಆಯೋಜಿಸಿದ್ದು ಒಟ್ಟು ಒಂದು ಸಾವಿರ ನೃತ್ಯೋತ್ಸವ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಅವರು ಪ್ರಜಾವಾಣಿಗೆ ತಿಳಿಸಿದ್ದಾರೆ. ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಕೆ.ಆರ್. ಅನಿತಾ ಮತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರೇಕ್ಷಾ, ಬಿ.ಎ. ಉಪಸ್ಥಿತರಿದ್ದರು.