ಧರ್ಮಸಿಂಗ್‍ರ ಜನ್ಮ ದಿನಾಚರಣೆ: ಡಿ. 25ಕ್ಕೆ ಧರ್ಮಪ್ರಜೆ ಪ್ರಶಸ್ತಿ ಪ್ರದಾನ

ಕಲಬುರಗಿ. ಡಿ.22: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ 84ನೇ ಜನ್ಮದಿನದ ಪ್ರಯುಕ್ತ ವಿಶ್ವಜ್ಯೋತಿ ಪ್ರತಿಷ್ಠಾನವು ಡಿ.25 ರಂದು ನಗರದ ಶಹಾಬಜಾರದಲ್ಲಿರುವ ಸುಲಫಲ ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಿರಿಯರಿಗೆ ಧರ್ಮಪ್ರಜೆ' ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಅವರ ಜನ್ಮದಿನವನ್ನು ಸಾಮಾಜಿಕವಾಗಿ ಆಚರಿಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ್ ತೇಗಲತಿಪ್ಪಿ ಹಾಗೂ ಸಂಚಾಲಕ ಬಿ.ಎಂ. ಪಾಟೀಲ್ ಕಲ್ಲೂರ್ ಅವರು ತಿಳಿಸಿದ್ದಾರೆ. ಧರ್ಮಸಿಂಗ್‍ರ ಕಟ್ಟಾ ಅನುಯಾಯಿಗಳಾದ ಹಿರಿಯ ಜೀವಿಗಳಾದ ಶಾಂತಗೌಡ ದುಮ್ಮದ್ರಿ, ಸಂಗಣ್ಣಾ ದೇಸಾಯಿ (ಅಲ್ಲಾಗೋಳ್) ನೆಲೋಗಿ, ದೇವೀಂದ್ರಪ್ಪ ಪೂಜಾರಿ ಬಿರಾಳ್, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ್, ಅಮೀರ್ ಜಮಾದಾರ್, ತಿಪ್ಪಣ್ಣ ನಾಯ್ಕೋಡಿ ಕಟ್ಟಿ ಸಂಗಾವಿ ಅವರಿಗೆಧರ್ಮಪ್ರಜೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ.
ಡಿಸೆಂಬರ್ 25ರ ಬೆಳಿಗ್ಗೆ 9.45ಕ್ಕೆ ನಗರದ ಸುಲಫಲ ಮಠದಲ್ಲಿ ಸಾರಂಗಮಠದ ಜಗದ್ಗುರು ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ಜೇವರ್ಗಿ ತಾಲ್ಲೂಕು ನಿವಾಸಿಗಳ ಸಂಘದ ಅಧ್ಯಕ್ಷ ವಿಜಯಕುಮಾರ್ ದುದ್ದಗಿ ಮಳ್ಳಿ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.