ಧರ್ಮರಾಯ ಸ್ವಾಮಿ ದೇವಸ್ಥಾನ ಬಳಿ 39 ಕೋವಿಡ್ ಪ್ರಕರಣ:ಕಟ್ಟಡ ಸೀಲ್ ಡೌನ್

ಬೆಂಗಳೂರು, ಏ.6- ಬಿಬಿಎಂಪಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧರ್ಮರಾಯ ಸ್ವಾಮಿ ದೇವಸ್ಥಾನ ಬಳಿಯ
ಮೆಹತಾ ಟವರ್ ಶೇರ್‌ಖಾನ್ ಕಟ್ಟಡದಲ್ಲಿ 39 ಕೋವಿಡ್ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆ ಬೀಗಮುದ್ರೆ ಹಾಕಿ ಸ್ಯಾನಿಟೈಸ್ ಮಾಡಲಾಗಿದೆ.

ನಗರದಲ್ಲಿಂದು ಕೋವಿಡ್ ಸೋಂಕಿನ ಪ್ರದೇಶಕ್ಕೆ ಭೇಟಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪರಿಶೀಲನೆ ನಡೆಸಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೋವಿಡ್ ಸೋಂಕಿತರ ಜೊತೆ ಸಂಪರ್ಕದಲ್ಲಿರುವವರನ್ನು ಪತ್ತೆಮಾಡಿ ಕೋವಿಡ್ ಪರೀಕ್ಷೆ ಮಾಡಿ ಐಸೋಲೇಟ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಅವರು, ಮೆಹತಾ ಟವರ್ ಶೇರ್‌ಖಾನ್ ಕಟ್ಟಡದಲ್ಲಿ 120 ಮಂದಿ ವಾಸಮಾಡುತ್ತಿರುತ್ತಾರೆ. ಮೊದಲಿಗೆ ಒಬ್ಬ ವ್ಯಕ್ತಿಗೆ ಕೋವಿಡ್ ಸೋಂಕು ಪತ್ತೆಯಾದ ಹಿನ್ನೆಲೆ ಕಟ್ಟಡದಲ್ಲಿರುವವರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಸೇರಿ 140 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿರುತ್ತದೆ.

ಈ ಸಂಬಂಧ 39 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಇಬ್ಬರನ್ನು ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇನ್ನುಳಿದ 37 ಮಂದಿಯನ್ನು ಸದರಿ ಕಟ್ಟಡ ಮಾಲೀಕರ ಮತ್ತೊಂದು ಕಟ್ಟಡವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿ ಅಲ್ಲಿ ಐಸೋಲೇಟ್ ಮಾಡಲಾಗಿರುತ್ತದೆ.

ಕಟ್ಟಡದ ಸುತ್ತಮುತ್ತಲು ಈಗಾಗಲೇ 600 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಕೋವಿಡ್ ಪರೀಕ್ಷೆ ಮಾಡಲು 8 ಟೆಸ್ಟಿಂಗ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೋವಿಡ್ ಸೋಂಕು ಪತ್ತೆಯಾದ ಸುತ್ತಮುತ್ತಲಿನ ಪ್ರದೇಶದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುವುದು. ಜೊತೆಗೆ ಹೆಚ್ಚು ಮಂದಿಗೆ ವ್ಯಾಕ್ಸಿನೇಷನ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.