ಧರ್ಮದ ಹೆಸರಿನಲ್ಲಿ ನಡೆವ ಸಂಘರ್ಷದಿಂದ ಅಶಾಂತಿ


ಧಾರವಾಡ,ಏ.17: ಧರ್ಮದ ನೆಲೆಗಟ್ಟನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ಸಮಾಜದಲ್ಲಿ ನಿರಂತರವಾಗಿ ಧರ್ಮದ ಹೆಸರಿನಲ್ಲಿ ಸಂಘರ್ಷಗಳನ್ನು ಉಂಟುಮಾಡುವ ಮೂಲಕ ಅಶಾಂತಿಗೆ ಕಾರಣವಾಗುತ್ತಿರುವುದು ದುರ್ದೈವದ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕಳವಳ ವ್ಯಕ್ತಪಡಿಸಿದರು.
ಅವರು ನಗರದ ಕಲಘಟಗಿ ರಸ್ತೆಯಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ನಡೆದ ಶ್ರೀ ಸೋಮೇಶ್ವರ ಶ್ರೀ ಶನೈಶ್ಚರ ಹಾಗೂ ಪರಿವಾರ ದೇವತೆಗಳ ದೇವಸ್ಥಾನಗಳ ಗೋಪುರ ಕಳಸಾರೋಹಣ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ದೇವರು ಒಬ್ಬನೇ ಇದ್ದು, ನಾಮಗಳು ಹಲವು ಇವೆ. ಧರ್ಮದ ನಿಜದ ನೆಲೆಯನ್ನು ಅರಿಯದವರು, ಜನರಲ್ಲಿ ಭಿನ್ನಾಭಿಪ್ರಾಯಗಳನ್ನು ತುಂಬುವ ಮೂಲಕ ಭಕ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅನಾದಿಕಾಲದಿಂದಲೂ ಸಹ ಪಂಚಭೂತಗಳನ್ನು ದೇವರು ಎಂದು ಪೂಜಿಸುತ್ತಾ ಅವುಗಳ ರಕ್ಷಣೆ ಮಾಡುತ್ತಾ ಈ ಭೂಮಿಗೆ ಕೊಡುಗೆ ನೀಡುತ್ತಾ ಬಂದಿದ್ದೇವೆ. ದೇವರು ಧರ್ಮ ಎನ್ನುವುದು ನಂಬಿಕೆ ಮೇಲೆ ನಿಂತಿದೆ ಹೊರತು ಬೇರೆಯಾವುದರ ಮೇಲೂ ಅಲ್ಲ. ನಂಬಿಕೆ ಇಲ್ಲದವರ ಮುಂದೆ ದೇವರು ಬಂದು ನಿಂತರೂ ಸಹ ಅವನನ್ನೇ ಅನುಮಾನದಿಂದ ನೋಡುವ ಜನ ಇಂದು ಸಮಾಜದಲ್ಲಿ ನಡೆಯುತ್ತಿರುವ ಅಶಾಂತಿಗೆ ಕಾರಣವಾಗಿದ್ದಾರೆ. ಇದರಿಂದಾಗಿ ಇಂದಿನ ಯುವ ಪೀಳಿಗೆಯಲ್ಲಿ ಧರ್ಮ, ದೇವರು ಹಾಗೂ ಧರ್ಮಗುರುಗಳ ಬಗ್ಗೆ ನಂಬಿಕೆ ವಿಶ್ವಾಸ ಇಲ್ಲದಂತಾಗಿ ಅಚಾತುರ್ಯಗಳು ನಡೆಯುತ್ತಿವೆ. ಕ್ಷುಲ್ಲಕ ಕಾರಣಗಳಿಗಾಗಿ ಯುವ ಜನರು ತಮ್ಮ ಜೀವನವನ್ನು ಹರಣ ಮಾಡಿಕೊಳ್ಳುತ್ತಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಯುವ ಜನರಲ್ಲಿ ದೇವರು ಸೇರಿದಂತೆ ಧಾರ್ಮಿಕತೆ ಬೆಳೆಸಿದ್ದೇ ಆದಲ್ಲಿ ಈ ರೀತಿಯ ಘಟನೆಗಳನ್ನು ತಪ್ಪಿಸಬಹುದು. ಆಗ ಸಮಾಜಕ್ಕೆ ಯುವ ಜನರು ಕೊಡುಗೆ ನೀಡಲು ಸಾಧ್ಯವಾಗಿ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಇಂದು ಜಾತಿಗಳನ್ನು ಬೆಳೆಸುವ ಕೆಲಸ ನಿರಂತವಾಗಿ ಸಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಜಾತಿಗಳು ಹೆಚ್ಚೆಚ್ಚು ಬೆಳೆದಂತೆ ವಿಘಟನೆಯಾಗಿ ಕೊನೆಗೆ ಧರ್ಮದ ಅಸ್ತಿತ್ವಕ್ಕೆ ಕುತ್ತು ಬರಲಿದೆ. ಬದಲಿಗೆ ನಾವೆಲ್ಲರೂ ಒಂದು ಎನ್ನುವ ಭಾವೈಕ್ಯ ಧರ್ಮವನ್ನು ಎತ್ತಿಕೊಂಡು ಮುಂದೆ ಸಾಗಬೇಕಿದೆ. ಧರ್ಮ ಹಾಗೂ ಜಾತಿಗಳ ನಡುವೆ ಸಂಘರ್ಷಗಳು ಹೆಚ್ಚಾದಲ್ಲಿ ಅದು ಅಧೋಗತಿಗೆ ಹೋಗಲಿದೆ ಎಂದೂ ರಂಭಾಪುರಿ ಜಗದ್ಗುರುಗಳು ನುಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ವಹಿಸಿದ್ದರು. ಕ್ಷೇತ್ರದ ಹಿನ್ನೆಲೆ ಕುರಿತು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಬಸಯ್ಯ ಬಳ್ಳಾರಿಮಠ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸರಸಾನಂದ ದೊಡವಾಡ, ಸದಸ್ಯರಾದ ಪ್ರಕಾಶ ಅಗಡಿ, ಬ್ರಹ್ಮದತ್ತ ರೂಪನಾರಾಯಣ ಮದನಕಬೀರ, ಪಿ.ಎಫ್. ಮೆಣಸಿನಕಾಯಿ, ಎಂ.ಎಸ್. ಬಡಿಗೇರ, ಸಿದ್ದು ಪಾಟೀಲ, ವಿರೇಶ ಕಿತ್ತೂರ, ಚನ್ನವೀರಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿ ವಂದಿಸಿದರು.