ಧರ್ಮದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ

ಸೈದಾಪುರ:ಎ.18:ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಧರ್ಮದ ರಕ್ಷಣೆ ಮಾಡಬೇಕು ಎಂದು ಅರೆಮಲ್ಲಪುರ ಶರಣಬಸವೇಶ್ವರ ಮಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮಿಗಳು ಆಶೀರ್ವಚನೆ ನೀಡಿದರು.

ಸೈದಾಪುರ ಹೊರವಲಯದ ಕೂಡ್ಲೂರು ಸೀಮೆಯಲ್ಲಿರುವ ಶ್ರೀ ಬಾಲಯೋಗಿ ರಾಜೇಂದ್ರ ಶ್ರೀ ಮಠಕ್ಕೆ ಶನಿವಾರ ಭೇಟಿ ನೀಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಹಿಂದೂ ಸನಾತನ ವ್ಯವಸ್ಥೆಯಲ್ಲಿ ಭೂಮಿ ಮೇಲೆ ಜನಿಸಿದ ಪ್ರತಿ ವ್ಯಕ್ತಿಗೂ ಸಮಾನತೆಯನ್ನು ಕಲ್ಪಿಸಲಾಗಿದೆ ಆದರೆ ನಂತರದಲ್ಲಿ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ, ಲಿಂಗಬೇಧ ಹುಟ್ಟು ಹಾಕಲಾಗಿದೆ. ಜಾತಿ ಧರ್ಮ ಆತನ ಹುಟ್ಟಿನ ಬದಲಿಗೆ ಕಾಯಕದಿಂದ ನಿರ್ಧರಿಸಬೇಕು. ಯಾರು ಧರ್ಮವನ್ನು ರಕ್ಷಣೆ ಮಾಡಿತ್ತಾರೆಯೋ ಅವರನ್ನು ಧರ್ಮ ಎಂದಿಗೂ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದೊಂದು ವರ್ಷದಿಂದ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿರುವ ಕೋವಿಡ್-19ರ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸುವ ಮೂಲಕ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು.

ಸಮಾಜದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಅಂಧ ಆಚರಣೆಗಳ ನಿರ್ಮೂಲನೆಗೆ ಶ್ರಮಿಸಿದ ನಾರಾಯಣಗುರುಗಳ ಕಾರ್ಯ ಸಾಧನೆ ಶ್ಲಾಘನೀಯ ಅವರು ತಮ್ಮ ಇಡೀ ಜೀವನವನ್ನು ಸಾಮಾಜಿಕ ನ್ಯಾಯಕ್ಕಾಗಿ ಮುಡುಪಾಗಿಟ್ಟ ಮಹಾತ್ಮರು ಎಂದು ಸ್ಮರಿಸಿದರು. ದಲಿತ, ಹಿಂದುಳಿದ ಶೋಷಿತ ವರ್ಗಗಳ ಧ್ವನಿಯಾಗಿ ಭಾರತೀಯ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ ಕೊಡುಗೆಯೂ ಅತ್ಯಮೂಲ್ಯವಾಗಿದೆ. ಸಮಾನತೆ ಸ್ವಾತಂತ್ರ್ಯ ಹಾಗೂ ಜಾತ್ಯತೀತತೆಯ ಮೂಲಕ ಸಮಾನತೆಯ ಮೂಲಕ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದಾರೆ ಎಂದರು.

ಈ ವೇಳೆ ಶ್ರೀ ಮಠದಲ್ಲಿ ಲೋಕ ಕಲ್ಯಾಣಕ್ಕಾಗಿ ಕಳೆದೊಂದು ತಿಂಗಳಿಂದ ಮೌನ ಅನುಷ್ಠಾನ ಮಾಡುತ್ತಿರುವ ಭೀಮಾಶಂಕರ ಶರಣರು, ಶಂಕಲಿಂಗ ತಾತಾ ಅಜಲಾಪುರ, ನಗರಸಭೆಯ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್ ಯಾದಗಿರಿ, ನಾಗರಾಜಗೌಡ ಮಾನಸಗಲ್, ಮಹೇಂದ್ರ ಅನಪುರ, ಮಹೇಂದ್ರ ಅಳ್ಳೊಳ್ಳಿ, ದೇವಪ್ಪಗೌಡ ರಾಚನಹಳ್ಳಿ, ಸಂಗಮೇಶ ಕಲಾಲ್, ವೆಂಕಟೇಶ ಕಲಾಲ್ ಬದ್ದೇಪಲ್ಲಿ, ಶರಣು ಕಲಾಲ್, ವೆಂಕಟೇಶ ಕಲಾಲ್ ಕೂಡ್ಲೂರು, ಬಾಲಗೌಡ ಕಲಾಲ್, ರಕ್ತದಾನಿ ರಾಘವೇಂದ್ರ ಕಲಾಲ್, ನಂದಗೋಪಾಲ ಪಟುವಾರಿ, ಉಮೇಶ ಸೈದಾಪುರ, ಶಾಂತಗೌಡ ಹೆಗ್ಗಣಗೇರಾ ಸೇರಿದಂತೆ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಅಂಬಿಕಾ ಕಲಾಲ್ ಸ್ವಾಗತಿಸಿದರು, ಬಸವಲಿಂಗಪ್ಪ ಕಲಾಲ್ ಕೂಡ್ಲೂರು ನಿರೂಪಿಸಿ, ವಂದಿಸಿದರು.

………………………

ಧರ್ಮ ಎಂದರೆ ಸದಾ ಸತ್ಕಾರ್ಯಗಳನ್ನು ಮಾಡುತ್ತ ಸಮಾಜದ ಜನರ ಒಳತಿಗಾಗಿ ಶ್ರಮಿಸುವುವುದು ಎಂದರ್ಥ. ಅಣ್ಣ ಬಸವಣ್ಣ, ಬ್ರಹ್ಮಶ್ರೀ ನಾರಾಯಣಗುರು, ಡಾ.ಬಿ.ಆರ್ ಅಂಬೇಡ್ಕರ್ ಸೇರಿದಂತೆ ಅನೇಕ ಮಹಾತ್ಮರು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ ಆ ಪುಣ್ಯಾತ್ಮರ ಜೀವನಾದರ್ಶಗಳನ್ನು ಪಾಲಿಸೋಣ.

ಡಾ. ಪ್ರಣವಾನಂದ ಸ್ವಾಮಿಜಿ, ಪೀಠಾಧಿಪತಿಗಳು.

ಶ್ರೀ ಶರಣಬಸವೇಶ್ವರ ಮಠ,

    ಅರೆಮಲ್ಲಪುರ (ಹಾವೇರಿ ಜಿಲ್ಲೆ)